ಮಂಡ್ಯ : ಶತಮಾನಗಳ ಸಿಟ್ಟನ್ನು ಸಿಡಿಮದ್ದಾಗಿಸಿಕೊಂಡು ಸಿದ್ದ ನಾಕಾ ನೇತೃತ್ವದಲ್ಲಿ ಯುದ್ಧ ಗೆದ್ದ ಭೀಮ ಕೋರೆಗಾಂವ್ ಯುದ್ಧವೀರರನ್ನು ನೆನೆಯಬೇಕಿದೆ. ಈ ಹಿನ್ನಲೆಯಲ್ಲಿ ಜ.1ರಂದು ಮದ್ದೂರು ತಾಲೂಕಿನ ಎಲ್ಲಾ ಶೋಷಿತ ಸಮುದಾಯದವರು 208 ನೇ ಭೀಮ ಕೋರೆಗಾಂವ್ ಕದನ ವಿಜಯೋತ್ಸವ ಆಚರಣೆಯಲ್ಲಿ ಭಾಗವಹಿಸಬೇಕೆಂದು ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮಂಗಳವಾರ ಹೇಳಿದರು.
ಜ.1 ಗುರುವಾರ ಬೆಳಿಗ್ಗೆ 9 ಗಂಟೆಗೆ ಮದ್ದೂರು ನಗರದ ನಗರಸಭೆ ಮುಂಭಾಗದ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗುವುದು ಎಂದರು.
ಭಾರತದಲ್ಲಿ ನಡೆದಿರುವ ಸಾವಿರಾರು ಯುದ್ಧಗಳ ಪೈಕಿ ಭೀಮಾ ಕೋರೆಗಾಂವ್ ಯುದ್ಧದ ವಿಜಯವು ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಲ್ಲದೆ ಆ ಯುದ್ಧವು ಮುಂದಿನ ತಲೆಮಾರಿಗಳಿಗೆ ಸ್ವಾಭಿಮಾನದ ಪ್ರತೀಕವಾಗಿ ಶಾಶ್ವತವಾಗಿ ಉಳಿದು ಬಿಟ್ಟಿದೆ. ಕೇವಲ 500ಮಂದಿ ಮಹಾರ್ ಸೈನಿಕರು 28 ಸಾವಿರ ಜಾತಿವಾದಿ ಪೇಶ್ವೆ ಸೈನಿಕರನ್ನು ಸೆದೆಬಡಿದ ಭಾರತದ ಸ್ವಾಭಿಮಾನದ ಇತಿಹಾಸವನ್ನು ಸಾರಿ ಸಾರಿ ಹೇಳುವಂತಿದೆ. ಹೀಗಾಗಿ 1 ಜನವರಿ 1818 ರಂದು ನಡೆದ ಭೀಮ ಕೋರೆಗಾಂವ್ ಯುದ್ಧವೀರರನ್ನು ನೆನೆಯದೆ ಹೋದರೆ ಚರಿತ್ರೆ ಕ್ಷಮಿಸದು. ಜಾತಿವಾದ, ಅಸ್ಪೃಶ್ಯತೆ ಹಾಗೂ ಸಕಲ ತಾರತಮ್ಯಗಳ ವಿರುದ್ಧ ನಡೆದ ಯುದ್ದವಾಗಿದೆ.
ಅಲ್ಲದೆ, 1927 ರ ನಂತರ ಡಾ.ಬಿ.ಆರ್.ಅಂಬೇಡ್ಕರ್ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಜ.1ರಂದು ಭೀಮಾ ಕೋರೆಗಾಂವ್ ವಿಜಯ ಸ್ಥಂಬದ ಮುಂದೆ ನಿಂತು ವೀರ ಸೈನಿಕರಿಗೆ ನಮನ ಸಲ್ಲಿಸುತ್ತಿದ್ದರು. ಅವರಿಂದಾಗಿ ಭೀಮಾ ಕೋರೆಗಾಂವ್‌ನ ವಿಜಯದ ಸ್ವಾಭಿಮಾನದ ಇತಿಹಾಸವು ದೇಶದ ಮೂಲೆ ಮೂಲೆಗೂ ತಲುಪುತ್ತಿದ್ದಂತೆ ಪ್ರತಿವರ್ಷ ಜ.1 ರಂದು ದೇಶಾದ್ಯಂತ ಲಕ್ಷಾಂತರ ಮಂದಿ ಕೋರೆಗಾಂವ್‌ಗೆ ತೆರಳಿ ಮಹಾರ್ ಸೈನಿಕರಿಗೆ ನಮನ ಸಲ್ಲಿಸಿ ಬರುವುದು ರೂಢಿಯಾಗಿದೆ. ಹಾಗೂ ತಾವಿರುವ ಪ್ರದೇಶಗಳಲ್ಲಿಯೇ ಶೋಷಿತ ಸಮುದಾಯಗಳ ಜನತೆ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದ್ದು, ಹೀಗಾಗಿ ತಾಲೂಕಿನ ಎಲ್ಲಾ ಶೋಷಿತ ಹಾಗೂ ನಾಗರೀಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಸಿದ್ದರಾಜು, ಯೋಗೇಶ್, ರಾಜೇಂದ್ರ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








