ಬಾಗಲಕೋಟೆ : ನೀವು ಯಾರನ್ನಾದ್ರೂ ಸಿಎಂ ಆದರೂ ಮಾಡಿಕೊಳ್ಳಿ ಡಿಸಿಎಂ ಆದರೂ ಮಾಡಿಕೊಳ್ಳಿ ಆದರೆ ನಮ್ಮ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡಿ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ರಾಜ್ಯದಲ್ಲಿ ಇದೀಗ ಸಿಎಂ ಬದಲಾವಣೆ ಹಾಗೂ ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ತೀವ್ರ ಚರ್ಚೆ ನಡೆಯುತ್ತಿದೆ. ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇಳಕಲ್ ನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದರು.
ನಾವು ಮೀಸಲಾತಿಗಾಗಿ ಪಾದಯಾತ್ರೆ ಆರಂಭಿಸುವ ಮೊದಲು. ನಮ್ಮವರು ಮಂತ್ರಿ ಆಗಬೇಕು, ಮುಖ್ಯಮಂತ್ರಿ ಅಗಬೇಕು ಅಂತ ಹೇಳಿದ್ದೆವು. ಆದ್ರೆ ಈಗ ನಮಗೆ ಮಂತ್ರಿ, ಮುಖ್ಯಮಂತ್ರಿಗಿಂತ ಮೀಸಲಾತಿ ಮುಖ್ಯವಾಗಿದೆ. ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಿಕೊಡಿ ಅನ್ನೋದೇ ನಮ್ಮ ಒತ್ತಾಯ. ಆದ್ರೆ ಇದುವರೆಗೂ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಯಾರನ್ನಾದ್ರೂ ಸಿಎಂ, ಡಿಸಿಎಂ ಮಾಡಿ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿದರೆ ಸಾಕು ಎಂದರು.
ಧರ್ಮಗುರುಗಳಾದವರು ಸರ್ಕಾರದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬಾರದು. ಪಕ್ಷದ ವರಿಷ್ಠರು ಏನಾದ್ರು ಕೇಳಿದ್ರೆ ಸಲಹೆಗಳನ್ನ ಕೊಡಬೇಕು. ಯಾರನ್ನ ಸಿಎಂ, ಡಿಸಿಎಂ ಮಾಡಬೇಕೆನ್ನೋದು ವರಿಷ್ಠರು, ಶಾಸಕರಿಗೆ ಬಿಟ್ಟಿದ್ದು. ಅವರಾಗಿಯೇ ನಮ್ಮನ್ನ ಕೇಳಿದರೆ ಸ್ವಾಮೀಜಿಗಳಾದವರು, ಧರ್ಮಗುರುಗಳಾದ ನಾವು ಸಲಹೆ ಕೊಡಬೇಕು. ಆದರೆ ಸರ್ಕಾರದ ಆಂತರಿಕ ವಿಚಾರದಲ್ಲಿ ಕೈ ಹಾಕಬಾರದು ಎಂದರು.