ಶಿವಮೊಗ್ಗ : ಕರ್ನಾಟಕದಲ್ಲಿ ಕನ್ನಡಿಗರಿಗೆ ಐಟಿ ಬಿಟಿ ಕಂಪನಿಗಳಲ್ಲಿ ಶೇ. 90ರಷ್ಟು ಉದ್ಯೋಗ ಕಡ್ಡಾಯಗೊಳಿಸಬೇಕು. ಕನ್ನಡಿಗರಿಗೆ ಉದ್ಯೋಗ ಕಲ್ಪಿಸದ ಐಟಿಬಿಟಿ ಕಂಪನಿಗಳಿಗೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ.
ಶನಿವಾರದಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆ ರಂಗಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಘಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಾಂಸ್ಕೃತಿಕ ವೈಭವವನ್ನು ಉದ್ಘಾಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಮಾತನಾಡಿದಂತ ಅವರು, ಕರ್ನಾಟಕದ ನೆಲಜಲ ಸಂಪನ್ಮೂಲ ಬಳಸಿಕೊಂಡು ಆದಾಯ ಗಳಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯವಾಗಿದೆ. ಶೇ. 90ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡುವ ಕಡ್ಡಾಯ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. ಕನ್ನಡ ನೆಲದಲ್ಲಿರುವ ಕಂಪನಿಗಳಲ್ಲಿ ಕನ್ನಡಿಗರು ಪರಕೀಯರಾಗಿ ಕಳೆದು ಹೋಗಬಾರದು. ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಎಂದರು.

ಸಾಂಸ್ಕೃತಿಕವಾಗಿ ಮೈಸೂರಿನ ನಂತರ ಸಾಗರ ಅತ್ಯಂತ ಶ್ರೀಮಂತ ಊರಾಗಿದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಂಗಭೂಮಿ ಸೇರಿದಂತೆ ವೈವಿಧ್ಯತೆ ನಮ್ಮೂರಿನಲ್ಲಿದೆ ಎನ್ನುವುದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಸಾಗರವನ್ನು ಅಭಿವೃದ್ದಿಯ ಜೊತೆ ಸಾಂಸ್ಕೃತಿಕವಾಗಿ ಸಹ ಕಟ್ಟುವ ಉದ್ದೇಶ ಹೊಂದಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದು ಇತರರಿಗೆ ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡಿದಂತೆ ಆಗುತ್ತದೆ ಎಂದರು.
ಶಿಕ್ಷಣ ಕ್ಷೇತ್ರದಿಂದ ಸತ್ಯನಾರಾಯಣ, ಸಾಹಿತ್ಯ ಕ್ಷೇತ್ರದಿಂದ ಮೋಹನ್ ಮೂರ್ತಿ, ಪ. ಬಂಗಾರಿಭಟ್, ಸಾಮಾಜಿಕ ಕ್ಷೇತ್ರದಿಂದ ಸರಸ್ವತಿ ನಾಗರಾಜ್, ಸಾಂಸ್ಕೃತಿಕ ಕ್ಷೇತ್ರದಿಂದ ಶಿವಮೂರ್ತಿ, ಕ್ರೀಡಾ ಕ್ಷೇತ್ರದಿಂದ ವಿಭವ ಕೆ.ಆರ್., ಎಸ್.ಡಿ.ಕೌಶಿಕ್ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿರೇಶಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ.ಈ., ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ನಗರಸಭೆ ಸದಸ್ಯರಾದಂತ ಗಣಪತಿ ಮಂಡಗಳಲೆ, ಗಣೇಶ್ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶೈಲೇಶ್ ಸ್ವಾಗತಿಸಿದರು. ಅಭಿನಂದಿತರ ಕುರಿತು ವಿ.ಟಿ.ಸ್ವಾಮಿ ಮಾತನಾಡಿದರು. ಮದನ್ ವಂದಿಸಿದರು. ಎಚ್.ಜಿ.ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ನಂತರ ವಿವಿಧ ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶ ಪ್ರಕಟ: ಜಾರಕಿಹೊಳಿ ಟೀಂಗೆ ಸ್ಪಷ್ಟ ಬಹುಮತ
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!








