ಬೆಂಗಳೂರು: ರಾಜ್ಯ ಸರ್ಕಾರದಿಂದ ವರ್ಗಾವಣೆ ದಂಧೆ ನಡೆಸಲಾಗುತ್ತಿದೆ. ಕಾಸಿಗಾಗಿ ಪೋಸ್ಟಿಂಗ್ ಮಾಡಲಾಗುತ್ತೆ ಎಂಬುದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷಗಳ ನಾಯಕರು ಸೇರಿದಂತೆ ಅನೇಕರು ಗಂಭೀರ ಆರೋಪವನ್ನೇ ಮಾಡಿದ್ದಾರೆ. ಈ ಹೊತ್ತಿನಲ್ಲೇ ಕೆಪಿಟಿಸಿಎಲ್ ನಿಂದ ಮಹಾ ಎಡವಟ್ಟು ಎನ್ನುವಂತೆ ಒಂದೇ ಹುದ್ದೆಗೆ 7 ಕಿರಿಯ ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಇದಲ್ಲದೇ 4 ವರ್ಷ ಪೂರೈಸದ ಜೆಇಗಳ ಸ್ಥಾನಕ್ಕೂ ಬೇರೊಬ್ಬರನ್ನು ವರ್ಗಾವಣೆ ಮಾಡಿ ಮಹಾ ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL) ನ ಆಡಳಿತ ಮತ್ತು ಮಾ.ಸಂ ನ ನಿರ್ದೇಶಕರು ದಿನಾಂಕ 31-07-2024ರಂದು 226 ಕಿರಿಯ ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಆದರೇ ವರ್ಗಾವಣೆಯ ಆದೇಶದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 7 ಜೆಇಗಳನ್ನು ಒಂದೇ ಸ್ಥಳಕ್ಕೆ, ಒಂದೇ ಹುದ್ದೆಗೆ ವರ್ಗಾಯಿಸಿ ಆದೇಶಿಸಿದ್ದಾರೆ.
ಒಂದೇ ಹುದ್ದೆಗೆ 7 ಕಿರಿಯ ಇಂಜಿನಿಯರ್ ವರ್ಗಾವಣೆ
ಕೆಪಿಟಿಸಿಎಲ್ 226 ಕಿರಿಯ ಇಂಜಿನಿಯರ್ ( ವಿದ್ಯುತ್/ಕಾಮಗಾರಿ) ವರ್ಗಾವಣೆ ಆದೇಶದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತ ಬಿಎಲ್ ಅಶ್ವಿತ, ವೈ.ಮಹೇಂದ್ರ, ಟಿಎನ್ ಜಯಸಿಂಹರಾಜು, ಉಮಾಪತಿ, ಎಸ್.ಗುರುಸ್ವಾಮಿ, ಆರ್.ಸುಶೀಲ ಹಾಗೂ ಕುಮಾರ ಎಂಬುವರನ್ನು ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವ್ಯಾಪ್ತಿಗೆ ಕಾರ್ಯ ಮತ್ತು ಪಾಲನ ವೃತ್ತಕ್ಕೆ ವರ್ಗಾವಣೆ ಮಾಡಿದ್ದಾರೆ. ಆದರೇ ಈ ಏಳು ಕಿರಿಯ ಇಂಜಿನಿಯರ್ ಗಳಿಗೆ ಒಂದೇ ಜಾಗಕ್ಕೆ ವರ್ಗಾವಣೆಯನ್ನು ಮಾಡಿ ಆದೇಶಿಸಿ ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ.
ಇನ್ನೂ ಹಾಸನದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವ್ಯಾಪ್ತಿಯ ಕಾರ್ಯ ಮತ್ತು ಪಾಲನ ವೃತ್ತಕ್ಕೆ ಬಿಎಸ್ ಚೇತನ್, ಬಿಎನ್ ಲೋಹಿತ್ ಎಂಬುವರನ್ನು ಒಂದೇ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಇವರಿಬ್ಬರಲ್ಲಿ ಯಾರು ವರ್ಗಾವಣೆಗೊಳಿಸಿದಂತ ಸ್ಥಳದಲ್ಲಿ ವರದಿ ಮಾಡಿಕೊಳ್ಳುವುದೋ ಎಂಬ ಗೊಂದಲಕ್ಕೂ ಒಳಗಾಗಿದ್ದಾರೆ.
ಷರತ್ತು ಮತ್ತು ಸೂಚನೆ ನೀಡಿ, ಆ ನಿಯಮವನ್ನೇ ಮೀರಿ ವರ್ಗಾವಣೆ
ಇದಷ್ಟೇ ಅಲ್ಲದೇ ವರ್ಗಾವಣೆಯ ಆದೇಶದಲ್ಲಿ ಷರತ್ತು ಹಾಗೂ ಸೂಚನೆ ಎಂಬುದಾಗಿ ನೀಡಲಾಗಿದೆ. ಅದರಲ್ಲಿ 2ನೇ ಷರತ್ತು, ಸೂಚನೆಯಾಗಿ ವರ್ಗಾವಣೆಗೆ ಅನುಮತಿ ನೀಡಲಾದ ಗ್ರೂಪ್-ಸಿ ಪದ ವೃಂದದ ನೌಕರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಕನಿಷ್ಠ 4 ವರ್ಷಗಳ ಸೇವೆಯನ್ನು ಹಾಗೂ ಗ್ರೂಪ್-ಡಿ ವರ್ಗದ ನೌಕರರು ಕನಿಷ್ಠ 7 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಲ್ಲಿ ಮಾತ್ರವೇ ಬದಲಾವಣೆಗೆ ಅರ್ಹರಾಗಿರುತ್ತಾರೆ ಎಂದು ಖಡಕ್ ಆಗೇ ತಿಳಿಸಲಾಗಿದೆ.
3ನೇ ಷರತ್ತು ಮತ್ತು ಸೂಚನೆಯಾಗಿ ವರ್ಗಾವಣೆಗೆ ಅನುಮತಿ ಕೋರಿರುವ ಕಚೇರಿಯಲ್ಲಿ ಈಗಾಗಲೇ ಬೇರೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ, ಸದರಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಅದೇ ವೃತ್ತ ವ್ಯಾಪ್ತಿಯಲ್ಲಿ ಖಾಲಿ ಇರುವ ಬೇರೆ ಕಚೇರಿಗೆ ನಿಯುಕ್ತಗೊಳಿಸಬೇಕಾದಲ್ಲಿ, ಸದರಿಯವರು ಗ್ರೂಪ್-ಸಿ ಪದವೃಂದದ ನೌಕರರಾಗಿದ್ದಲ್ಲಿ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಕನಿಷ್ಠ 4 ವರ್ಷಗಳ ಸೇವೆಯನ್ನು ಹಾಗೂ ಗ್ರೂಪ್-ಡಿ ಪದ ವೃಂದದ ನೌಕರರಾಗಿದ್ದಲ್ಲಿ ಕನಿಷ್ಠ 7 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಲ್ಲಿ ಮಾತ್ರವೇ ವೃತ್ತ ಮಟ್ಟದಲ್ಲಿ ಬದಲಾವಣೆಗೆ ಅರ್ಹರಾಗಿರುತ್ತಾರೆ ಎಂಬುದಾಗಿ ಸ್ಪಷ್ಟವಾಗೇ ತಿಳಿಸಲಾಗಿದೆ.
ಕನಿಷ್ಠ 4 ವರ್ಷ ಪೂರೈಸದ ಜೆಇಗಳ ಸ್ಥಾನಕ್ಕೂ ಬೇರೆಯವರನ್ನು ವರ್ಗಾವಣೆ
ಹೀಗೆ ಷರತ್ತು ಮತ್ತು ಸೂಚನೆಗಳನ್ನು ಸ್ಪಷ್ಟ, ಖಡಕ್ ಆಗೇ ತಿಳಿಸಿ, ವರ್ಗಾವಣೆ ಆದೇಶದಲ್ಲೇ ಹೇಳಿದ್ದರೂ, ಗ್ರೂಪ್-ಸಿ ಪದವೃಂದದ ನೌಕರರು ಕನಿಷ್ಠ 4 ವರ್ಷ ಸೇವೆ ಪೂರ್ಣಗೊಳಿಸದೇ ಇದ್ದರೂ ಅವರ ಸ್ಥಳಗಳಿಗೆ ಬೇರೆಯವರನ್ನು ವರ್ಗಾವಣೆಗೊಳಿಸಿ ಆದೇಶದಲ್ಲಿ ತಿಳಿಸಲಾಗಿದೆ. ಕೆಲವರು 1 ವರ್ಷ, ಮತ್ತೆ ಕೆಲವರು 2 ವರ್ಷ, ಮಗದಷ್ಟು ಮಂದಿ 3 ವರ್ಷ ಸೇವೆ ಸಲ್ಲಿಸಿದ್ದರೇ ಅವರ ಸ್ಥಾನಕ್ಕೆ ಕೆಪಿಟಿಸಿಎಲ್ ಬೇರೆಯ ಜೆಇಗಳನ್ನು ವರ್ಗಾವಣೆ ಮಾಡಿ ಮತ್ತೊಂದು ಮಹಾ ಎಡವಟ್ಟು ಮಾಡಿರುವುದು ಕಂಡು ಬಂದಿದೆ.
ಒಟ್ಟಾರೆಯಾಗಿ ಕೆಪಿಟಿಸಿಎಲ್ ದಿನಾಂಕ 31-07-2024ರಂದು ಮಾಡಿರುವಂತ ಕಿರಿಯ ಇಂಜಿನಿಯರ್ ವರ್ಗಾವಣೆಯಲ್ಲಿ ಗೋಲ್ಮಾಲ್, ಕರ್ಮಕಾಂಡದ ವಾಸನೆ ಎದ್ದು ಕಾಣುತ್ತಿದೆ. ಅಷ್ಟೇ ಅಲ್ಲದೇ ಹಣ ಪಡೆದು ಒಂದೇ ಹುದ್ದೆಗೆ 7 ಅಧಿಕಾರಿಗಳನ್ನು ವರ್ಗಾಯಿಸಿದಂತ ಆರೋಪ ಕೇಳಿ ಬಂದಿದೆ. ಜೊತೆ ಜೊತೆಗೆ 1 ವರ್ಷಕ್ಕಿಂತ ಹೆಚ್ಚು ಜೆಇಗಳು ಸೇವೆ ಸಲ್ಲಿಸಿದ್ದರೂ, ಅವರ ಸ್ಥಾನಕ್ಕೆ ಬೇರೆಯವರ ಪ್ರಭಾವದಿಂದಲೇ, ಹಣಬಲದಿಂದಲೇ ರಾಜ್ಯ ಸರ್ಕಾರ ಮತ್ತೊಬ್ಬರನ್ನು ವರ್ಗಾವಣೆ ಮಾಡಿರುವುದು ಆದೇಶ ಎಡವಟ್ಟುಗಳಿಂದ ತೋರಿ ಬಂದಿದೆ.
ಇಂಧನ ಸಚಿವ ಕೆ.ಜೆ ಜಾರ್ಜ್ ಸಾಹೇಬ್ರೇ ಇದೇನು ನಿಮ್ಮ ಇಲಾಖೆಯ ಎಡವಟ್ಟು?
ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಅಧೀನದ ಇಲಾಖೆಯಾಗಿರುವಂತ ಕೆಪಿಟಿಸಿಎಲ್ ವರ್ಗಾವಣೆ ಕರ್ಮಕಾಂಡ, ಗೋಲ್ಮಾಲ್ ಇಷ್ಟು ದೊಡ್ಡದಾಗಿ ನಡೆದಿದ್ದರೂ ನಿಮಗೆ ಗಮನಕ್ಕೆ ಬಂದಿಲ್ವ? 226 ಕಿರಿಯ ಇಂಜಿನಿಯರ್ ವರ್ಗಾವಣೆಯ ಆದೇಶದಲ್ಲಿ ಹೀಗೆಲ್ಲ ಎಡವಟ್ಟುಗಳು ಯಾಕೆ ಅಂತ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅಲ್ಲದೇ ಇದರಲ್ಲೂ ಗೋಲ್ಮಾಲ್, ಕಾಸಿಗಾಗಿ ಪೋಸ್ಟಿಂಗ್ ದಂಧೆ ನಡೆಯಿದ್ಯ ಅಂತನೂ ಕೇಳುತ್ತಿದ್ದಾರೆ. ಆ ಬಗ್ಗೆ ಸಚಿವ ಕೆ.ಜೆ ಜಾರ್ಜ್ ಯಾವ ನಿರ್ಧಾರವನ್ನು ತಳೆಯಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಒಟ್ಟಾರೆಯಾಗಿ ಕೆಪಿಟಿಸಿಎಲ್ 226 ಕಿರಿಯ ಇಂಜಿನಿಯರ್ ವರ್ಗಾವಣೆ ಪಟ್ಟಿಯಲ್ಲಿ ಸಂಪೂರ್ಣ ಲೋಪ, ಮಹಾ ಎಡವಟ್ಟುಗಳ ಸಮಾಲೆಯೇ ಇದ್ದು, ಪಟ್ಟಿಯನ್ನು ರದ್ದುಗೊಳಿಸಬೇಕು ಎಂಬುದಾಗಿ ಹಲವರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಪಿಟಿಸಿಎಲ್ ಕ್ರಮವಹಿಸುತ್ತೋ ಅಥವಾ ವರ್ಗಾವಣೆ ಆದೇಶದಲ್ಲಿ ಮಾಡಿರುವ ಎಡವಟ್ಟು ಸರಿಪಡಿಸಿ, ಪರಿಷ್ಕೃತ ವರ್ಗಾವಣೆ ಆದೇಶ ಹೊರಡಿಸುತ್ತೋ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 45 ಕಾಲೇಜುಗಳಲ್ಲಿ ‘4 ಹೊಸ ಕೋರ್ಸ್’ ಆರಂಭ
BREAKING: ಶಿರೂರು ಬಳಿಯ ಗುಡ್ಡ ಕುಸಿತ ಕೇಸ್: ಗಂಗಾವಳಿ ನದಿಯಲ್ಲಿ ಲಾರಿಯ ಹಲವು ಬಿಡಿಭಾಗಗಳು ಪತ್ತೆ
ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ಕಾರ್ಯ ತ್ವರಿತವಾಗಿ ಮುಗಿಸಲು ಸಿಎಂ ಸಿದ್ದರಾಮಯ್ಯ ಸೂಚನೆ