ಬೆಂಗಳೂರು : ಇಡೀ ದೇಶವೇ ಬೆಚ್ಚಿ ಬೀಳಿಸುವಂತೆ ಸುದ್ದಿಯಾಗಿರುವ ಬೆಂಗಳೂರಿನ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಾಲಕ್ಷ್ಮೀ ಕೊಲೆ ಪ್ರಕರಣದ ಆರೋಪಿಗಾಗಿ ಕೇಂದ್ರ ವಿಭಾಗದ ಪೊಲೀಸರು ಹೊರರಾಜ್ಯಗಳಿಗೆ ತೆರಳಿ ಹಂತಕನ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.ಇದರ ಮಧ್ಯ ಮಹಾಲಕ್ಷ್ಮಿಯ ದೇಹ ತುಂಡು ಮಾಡಿ ಇಟ್ಟಿದ್ದ ಫ್ರಿಜ್ ಅನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಪತ್ತೆಗಾಗಿ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿರುವ ಪೊಲೀಸರು, ಮಹಾಲಕ್ಷ್ಮೀ ಪತಿ ಹೇಮಂತ್ ದಾಸ್ ಶಂಕೆ ವ್ಯಕ್ತಪಡಿಸಿರುವ ವ್ಯಕ್ತಿ ಸೇರಿದಂತೆ ಮೃತಳ ಸಂಪರ್ಕದಲ್ಲಿದ್ದ ಕೆಲವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮತ್ತೊಂದೆಡೆ, ಆಕೆಯ ಸಂಪರ್ಕದಲ್ಲಿದವರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹರಿತವಾದ ಆಯುಧದಿಂದ ಮಹಾಲಕ್ಷ್ಮೀ ಮೃತದೇಹವನ್ನು ಸುಮಾರು 50 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ಹಂತಕ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಎಫ್ಎಸ್ಎಲ್ ಅಧಿಕಾರಿಗಳು ಬಂದು ತಪಾಸಣೆ ನಡೆಸಿದ್ದರು. ಎಲ್ಲ ರೀತಿಯ ಸ್ಯಾಂಪಲ್, ಸಾಕ್ಷ್ಯಾಧಾರ ಸಂಗ್ರಹಿಸಿದ್ದ ಅಧಿಕಾರಿಗಳು ಮೃತದೇಹವಿಟ್ಟಿದ್ದ ಫ್ರಿಡ್ಜ್ನ್ನು ಸೋಮವಾರ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಘಟನೆ ನಡೆದ ಮನೆಗೆ ತೆರಳಿದ್ದ ಪೊಲೀಸರು, ಗೂಡ್ಸ್ ವಾಹನದ ಮೂಲಕ ಫ್ರಿಡ್ಜ್ನ್ನು ಲ್ಯಾಬ್ಗೆ ಕಳುಹಿಸಿಕೊಟ್ಟಿದ್ದಾರೆ.