ಚೆನ್ನೈ: ಮಕ್ಕಳು, ಹತ್ತಿರದ ಸಂಬಂಧಿಕರು ಹಿರಿಯ ನಾಗರೀಕರ ಆರೈಕೆ ಮಾಡದೇ ಇದ್ದರೇ, ಅವರು ದಾನಪತ್ರದ ಮೂಲಕ ಇತ್ಯರ್ಥ ಕರಾರಿನ ಮೂಲಕ ಮಾಡಿಕೊಟ್ಟಂತ ಅವರ ಹೆಸಿನ ಆಸ್ತಿ ವರ್ಗಾವಣೆ ರದ್ದು ಮಾಡಲು ಹಿರಿಯ ನಾಗರೀಕರಿಗೆ ಅವಕಾಶ ಇದೆ ಎಂಬುದಾಗಿ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಮಿಳುನಾಡಿನ ನಾಗಪಟ್ಟಣಂ ವ್ಯಾಪ್ತಿಯ ನಾಗಲಕ್ಷ್ಮೀ ಎಂಬುವರ ಪತಿ ತೀರಿಕೊಂಡ ನಂತ್ರ, ತನ್ನ ಮಗ ಕೇಶವನ್ ಜೊತೆಗೆ ವಾಸಿಸುತ್ತಿದ್ದರು. ತನ್ನ ಇನ್ನೂ ಇಬ್ಬರು ಮಕ್ಕಳಿದ್ದರೂ, ಅವರನ್ನು ಬಿಟ್ಟು, ಕೇಶವನ್ ಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಂತ ಕಾರಣ ತನ್ನ ಆಸ್ತಿಯನ್ನು ದಾನವಾಗಿ ನೀಡಿದ್ದರು. ಕೇಶವನ್ ಗೆ ತಾಯಿ ನಾಗಲಕ್ಷ್ಮೀ ತನ್ನ ಆಸ್ತಿಯನ್ನು ದಾನಪತ್ರದಲ್ಲಿ ಮಾಡಿಸಿಕೊಟ್ಟಿದ್ದರು.
ಕೇಶವನ್ ಅಕಾಲಿಕ ನಿಧನದ ಬಳಿಕ ಅವರ ಪತ್ನಿ ಮಾಲಾ ಎಂಬುವರು, ಅತ್ತೆ ನಾಗಲಕ್ಷ್ಮಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಊಟ, ಆರೈಕೆಯನ್ನು ಮಾಡುತ್ತಿರಲಿಲ್ಲ. ಹೀಗಾಗಿ ಕಾನೂನಿನ ಮೊರೆ ಹೋಗಿದ್ದಂತ ನಾಗಲಕ್ಷ್ಮೀ ಅವರು ನಾಗಪಟ್ಟಣಂ ವ್ಯಾಪ್ತಿಯ ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ತಾನು ತನ್ನ ಪುತ್ರ ಕೇಶವನ್ ಗೆ ಮಾಡಿಕೊಟ್ಟಿದ್ದಂತ ದಾನಪತ್ರವನ್ನು ರದ್ದುಗೊಳಿಸುವಂತೆ ಕೋರಿದ್ದರು.
ನಾಗಲಕ್ಷ್ಮೀ ಅವರ ಅರ್ಜಿಯ ವಿಚಾರಣೆ ನಡೆಸಿದ್ದಂತ ಉಪ ವಿಭಾಗಾಧಿಕಾರಿಗಳು, ಪುತ್ರ ಕೇಶವನ್ ಗೆ ಮಾಡಿಕೊಟ್ಟಿದ್ದಂತ ಆಸ್ತಿಯ ದಾನಪತ್ರವನ್ನು ರದ್ದುಗೊಳಿಸಿ, ನಾಗಲಕ್ಷ್ಮೀಗೆ ಮರಳಿ ಮಾಡಿಕೊಟ್ಟಿದ್ದರು. ಹೀಗಾಗಿ ಸೊಸೆ ಮಾಲಾ ಅವರು ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೇ ಕೋರ್ಟ್ ಮಾಲಾ ಅವರ ಮನವಿಯನ್ನು ತಿರಸ್ಕರಿಸಿ, ನಾಗಪಟ್ಟಣಂ ಕಂದಾಯ ಉಪ ವಿಭಾಗಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿತ್ತು.
ಈ ಹಿನ್ನಲೆಯಲ್ಲಿ ಸೊಸೆ ಮಾಲಾ ಅವರು, ತನ್ನ ಗಂಡ ಕೇಶವನ್ ಗೆ ನಮ್ಮ ಅತ್ತೆ ನಾಗಲಕ್ಷ್ಮೀ ಮಾಡಿಸಿಕೊಟ್ಟಿದ್ದಂತ ಆಸ್ತಿಯ ದಾನಪತ್ರ ರದ್ದುಗೊಳಿಸದಂತೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಪೀಠವು ಪಾಲಕರು ಮತ್ತು ಹಿರಿಯ ನಾಗರೀಕ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ 2007ರ ಸೆಕ್ಷನ್ 23(1)ರ ಅನ್ವಯ ಹಿರಿಯ ನಾಗರೀಕರ ಹಿತ ಕಾಯುವ ಉದ್ದೇಶದಿಂದ ರೂಪಿಸಲಾಗಿದೆ ಎಂಬುದಾಗಿ ಅಭಿಪ್ರಾಯ ಪಟ್ಟರು.
ತಮ್ಮ ಆಸ್ತಿಯನ್ನು ಪಡೆದ ವ್ಯಕ್ತಿಯು ತಮ್ಮ ಮೂಲ ಅಗತ್ಯತೆಗಳನ್ನು ನೋಡಿಕೊಳ್ಳುತ್ತಾನೆ ಎನ್ನುವ ನಿರೀಕ್ಷೆ ಅವರಲ್ಲಿರುತ್ತದೆ. ಆದರೇ ಆ ಕೆಲಸವನ್ನು ಆಸ್ತಿ ಪಡೆದ ವ್ಯಕ್ತಿ ಮಾಡದೇ ಇದ್ದರೇ, ಆಸ್ತಿ ವರ್ಗಾವಣೆಯನ್ನು ರದ್ದುಪಡಿಸುವಂತೆ ನ್ಯಾಯಮಂಡಳಿಯನ್ನು ಕೋರು ಹಕ್ಕು ಹಿರಿಯ ನಾಗರೀಕರಿಗೆ ಇದೆ ಎಂಬುದಾಗಿ ತಿಳಿಸಿತು.
ಈ ಪ್ರಕರಣದಲ್ಲಿ ಆಸ್ತಿ ವರ್ಗಾವಣೆ ಮಾಡಿದ ಮಹಿಳೆಯನ್ನು ಸೊಸೆಯು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ ಎಂಬುದನ್ನು ಕೂಡ ಗೊತ್ತಾಗಿದೆ ಎಂಬುದಾಗಿ ನ್ಯಾಯಪೀಠ ಹೇಳಿ, ಸೊಸೆ ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತು.