ಮಂಡ್ಯ : ಮದ್ದೂರು ನಗರದ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಉಗ್ರ ನರಸಿಂಹ ಸ್ವಾಮಿಯ ಭವ್ಯ ಬ್ರಹ್ಮೋತ್ಸವವು ಗುರುವಾರ ಸಡಗರ ಸಂಭ್ರಮದಿಂದ ಸಹಸ್ರಾರು ಭಕ್ತಾಧಿಗಳು ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಪರಭವ ನಾಮ ಸಂವತ್ಸರದ ವೈಶಾಖ ಮಾಸ ಬಹುಳ ಪಂಚಮಿ ಪೂರ್ವಾಷಾಡ ನಕ್ಷತ್ರದಲ್ಲಿ ನಡೆದ ರಥೋತ್ಸವಕ್ಕೆ ಸಾಕ್ಷಿಯಾಗಲು ನಾಡಿನ ವಿವಿಧೆಡೆಯಿಂದ ಹಾಗೂ ನೆರೆರಾಜ್ಯಗಳಿಂದ ಸಾವಿರಾರು ಭಕ್ತ ಸಾಗರವೇ ಹರಿದು ಬಂದಿತ್ತು.
ಸಹಸ್ರಾರು ಭಕ್ತಾದಿಗಳು ಗೋವಿಂದ… ಗೋವಿಂದ… ಎಂಬ ನಾಮಸ್ಮರಣೆಯ ನಡುವೆ ರಥವು ಕೋಟೆ ಬೀದಿಯ ಪ್ರಮುಖ ಬೀದಿಗಳಲ್ಲಿ ಎಳೆದು ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ರಥೋತ್ಸವದ ಅಂಗವಾಗಿ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಅಲಂಕಾರಗಳನ್ನು ನೆರವೇರಿಸಲಾಯಿತು. ನಂತರ ಸಕಲ ಮಂಗಳ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಅಲಂಕೃತ ಮಹಾರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ರಥೋತ್ಸವದ ಅಂಗವಾಗಿ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಹಾಗೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಕೆ.ಎಂ.ಉದಯ್ ಪತ್ನಿ ವಿನುತಾ ರಥೋತ್ಸವದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಇದೇ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಪ್ರಧಾನ ಅರ್ಚಕ ನಾರಾಯಣ್, ಪಾರು ಪತ್ತೇಗಾರ್ ಕೆ.ಆರ್.ಮಂಜುನಾಥ್, ಲಕ್ಷ್ಮೀ ನರಸಿಂಹನ್, ಹರೀಶ್ ಸೇರಿದಂತೆ ಇತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








