ಮಂಡ್ಯ : ಜಿಲ್ಲೆಯಲ್ಲಿ ಕೃಷಿ ಮತ್ತು ಹೈನುಗಾರಿಕೆಯೇ ಪ್ರಮುಖ ವೃತ್ತಿಯಾಗಿದ್ದು, ಹಲವಾರು ಕುಟುಂಬಗಳು ಹೈನುಗಾರಿಕೆಯ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ, ರಾಸುಗಳ ಆರೋಗ್ಯದ ದೃಷ್ಟಿಯಿಂದ ಕ್ಷೇತ್ರದಲ್ಲಿ ಪಶು ಆಸ್ಪತ್ರೆಗಳನ್ನು ಹೆಚ್ಚಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಸೋಮವಾರ ಹೇಳಿದರು.
ಮದ್ದೂರು ತಾಲೂಕಿನ ವಳಗೆರೆಹಳ್ಳಿಯಲ್ಲಿ ನೂತನ ಪಶು ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೃಷಿ ಮತ್ತು ಹೈನುಗಾರಿಕೆಯೇ ಪ್ರಮುಖವಾಗಿದೆ. ಹಲವು ಕುಟುಂಬಗಳ ನಿರ್ವಹಣೆಗೆ ಹೈನುಗಾರಿಕೆಯಿಂದಲೇ ಆರ್ಥಿಕಾಭಿವೃದ್ದಿ ಸಾಧ್ಯವಾಗುತ್ತಿದೆ. ಹೀಗಾಗಿ, ರಾಸುಗಳಿಗೆ ತೊಂದರೆಯಾದಲ್ಲಿ ಕುಟುಂಬದ ಆಧಾರವೇ ಕಳಚಿ ಬಿದ್ದಾಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸತತ ಪ್ರಯತ್ನ ಮಾಡಿದ್ದರ ಫಲವಾಗಿ ಬೇರೆ ಗ್ರಾಮಕ್ಕೆ ಮಂಜೂರಾಗಿದ್ದ ಆಸ್ಪತ್ರೆಯನ್ನು ವಳಗೆರೆಹಳ್ಳಿ ಗ್ರಾಮದಲ್ಲಿ ನೂತನ ಪಶು ಆಸ್ಪತ್ರೆಯ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದರಿಂದ ವಳಗೆರೆಹಳ್ಳಿ, ಸೊಳ್ಳೆಪುರ, ರಾಂಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ. ವೈದ್ಯಕೀಯ ಸೇವೆ ರಾಸುಗಳಿಗೆ ತ್ವರಿತವಾಗಿ ದೊರೆಯುವಂತಾಗಲು ಉಪಯುಕ್ತವಾಗಿದೆ ಎಂದರು.
ವಳಗೆರೆಹಳ್ಳಿ, ಸೊಳ್ಳೆಪುರ ಹಾಗೂ ರಾಂಪುರ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಹಂತ ಹಂತವಾಗಿ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರು ಸೇರಿದಂತೆ ಆಧ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಈ ಗ್ರಾಮಗಳಲ್ಲಿ ನೀರಾವರಿ ಯೋಜನೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈಗಾಗಲೇ 15 ಕೋಟಿ ವೆಚ್ಚದಲ್ಲಿ ನಾಲಾ, ಪಿಕಪ್ ನಾಲೆಗಳ ಆಧುನಿಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದಷ್ಟು ಬೇಗ ಅನುದಾನ ಬಿಡುಗಡೆಯಾಗುವ ಭರವಸೆ ಇದೆ ಎಂದರು.
ಇದೇ ವೇಳೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಗ್ರಾ.ಪಂ ಸದಸ್ಯರಾದ ದಯಾನಂದ್, ಸುನೀಲ್, ಪುಟ್ಟರಾಜು, ಶಂಕರೇಗೌಡ, ಉಮಾಶಂಕರ್, ಆದೇಶ್, ಸೋ.ಶಿ.ಪ್ರಕಾಶ್, ಹೊಂಬಯ್ಯ, ಉಮೇಶ್, ಗಿರೀಶ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ್, ಡಾ. ಶಿವಕುಮಾರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮದ್ದೂರು ಕಾಂಗ್ರೆಸ್ ಭವನ ನಿರ್ಮಾಣಕ್ಕೆ 1 ಲಕ್ಷ ರೂ ದೇಣಿಗೆ ನೀಡಿದ ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ








