ಬೆಂಗಳೂರು : ನೀವು ಎಲ್‌ಪಿಜಿ (LPG) ಸಿಲಿಂಡರ್ ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ಇಕೆವೈಸಿ ಪ್ರಕ್ರಿಯೆಯ ಬಗ್ಗೆ ಹರಿದಾಡುತ್ತಿರುವ ಗೊಂದಲಗಳಿಗೆ ಇಲ್ಲಿದೆ ಸ್ಪಷ್ಟನೆ. ಕೇಂದ್ರ ಸರ್ಕಾರದ ಸೂಚನೆಯಂತೆ ಗ್ಯಾಸ್ ಸಂಪರ್ಕಕ್ಕೆ ಇಕೆವೈಸಿ ಮಾಡಿಸುವುದು ಈಗ ಅನಿವಾರ್ಯವಾಗಿದೆ.
ಹೌದು ಎಲ್‌ಪಿಜಿ ಗ್ರಾಹಕರು ಇಕೆವೈಸಿ ಮಾಡುವುದು ಕಡ್ಡಾಯ ಎನ್ನುವಂತಹ ಸುದ್ದಿ ಎರಡು ದಿನಗಳಿಂದ ಕೇಳಿಬರುತ್ತಿದೆ. ಇದೇ ವೇಳೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಆಧಾರ್ ಬಯೋಮೆಟ್ರಿಲ್ ದೃಢೀಕರಣ ಅಥವಾ ಇಕೆವೈಸಿಯು ಎಲ್ಲಾ ಎಲ್‌ಪಿಜಿ ಗ್ರಾಹಕರಿಗೂ ಕಡ್ಡಾಯವೇನಲ್ಲ. ಇಕೆವೈಸಿ ಮಾಡಿಸಿಲ್ಲದ ಎಲ್‌ಪಿಜಿ ಗ್ರಾಹಕರು ಮಾತ್ರ ಈ ಗ್ಯಾಸ್ ಪಡೆಯಲು ಇಕೆವೈಸಿ ಮಾಡುವುದು ಕಡ್ಡಾಯ ಎಂದು ಸಚಿವಾಲಯವು ಹೇಳಿದೆ.
* ಉಜ್ವಲ ಯೋಜನೆ ಫಲಾನುಭವಿಗಳು: ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆದವರು ತಪ್ಪದೇ ಇಕೆವೈಸಿ ಮಾಡಿಸಬೇಕು.
* ಸಬ್ಸಿಡಿ ಪಡೆಯುವ ಗ್ರಾಹಕರು: ಗ್ಯಾಸ್ ಸಬ್ಸಿಡಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಬೇಕೆಂದರೆ ಇಕೆವೈಸಿ ಕಡ್ಡಾಯ.
* ಬಹಳ ದಿನಗಳಿಂದ ಅಪ್‌ಡೇಟ್ ಆಗದ ಖಾತೆಗಳು: ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ದಾಖಲೆಗಳು ಸರಿಯಾಗಿಲ್ಲದಿದ್ದರೆ ಇಕೆವೈಸಿ ಮಾಡಿಸುವುದು ಉತ್ತಮ.
ಇಕೆವೈಸಿ ಮಾಡಿಸುವುದು ಹೇಗೆ? ಗ್ರಾಹಕರು ಎರಡು ಸರಳ ವಿಧಾನಗಳ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು:
* ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ: ನಿಮ್ಮ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಕನೆಕ್ಷನ್ ಪುಸ್ತಕದೊಂದಿಗೆ ಹತ್ತಿರದ ವಿತರಕರ ಕಚೇರಿಗೆ ಹೋಗಿ ಬಯೋಮೆಟ್ರಿಕ್ ಮೂಲಕ ಇಕೆವೈಸಿ ಮಾಡಿಸಬಹುದು.
* ಮೊಬೈಲ್ ಆಪ್ ಮೂಲಕ:
ಇಂಡೇನ್ (Indane), ಹೆಚ್‌ಪಿ (HP) ಅಥವಾ ಭಾರತ್ ಗ್ಯಾಸ್ (Bharat Gas) ಆಪ್‌ಗಳನ್ನು ಬಳಸಿ ಮನೆಯಲ್ಲೇ ಕುಳಿತು ಫೇಸ್ ಸ್ಕ್ಯಾನ್ ಮೂಲಕವೂ ಪೂರ್ಣಗೊಳಿಸಬಹುದು. ಕೊನೆಯ ದಿನಾಂಕ ಯಾವಾಗ? ಸರ್ಕಾರವು ಕಾಲಕಾಲಕ್ಕೆ ಈ ಗಡುವನ್ನು ವಿಸ್ತರಿಸುತ್ತಾ ಬಂದಿದೆ. ಆದರೆ, ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಮತ್ತು ಸಬ್ಸಿಡಿ ಕಡಿತವಾಗದಂತೆ ತಡೆಯಲು ಶೀಘ್ರವಾಗಿ ಇಕೆವೈಸಿ ಮಾಡಿಸಿಕೊಳ್ಳುವುದು ಸುರಕ್ಷಿತ.








