ಬೆಂಗಳೂರು: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಳಗೇರಿ ನಿವಾಸಿಗಳಿಗೆ ಸರ್ಕಾರದ ವತಿಯಿಂದ ಕಡಿಮ ವೆಚ್ಚದಲ್ಲಿ ವಸತಿ ಸೌಕರ್ಯ ಕಲ್ಪಿಸುವ ಕುರಿತು ಪರಿಶೀಲಿಸಲು ಕ್ಷೇತ್ರದ ಶಾಸಕರೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ವಸತಿ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಕ್ಷೇತ್ರ ಪರ್ಯಟನೆ ನಡೆಸಿದರು.
ಸರ್ವಜ್ಞ ನಗರದ ವಸತಿ ಸಂಕೀರ್ಣ ಹಾಗೂ ಕೊಳಗೇರಿಗೆ ವಸತಿ ಸಚಿರೊಂದಿಗೆ ಗುರುವಾರ ಭೇಟಿ ನೀಡಿದ ಸಚಿವ ಕೆ.ಜೆ.ಜಾರ್ಜ್ ಅವರು ವಸ್ತುಸ್ಥಿತಿ ಪರಿಶೀಲಿಸದರಲ್ಲದೆ, ಕೊಳೇರಿ ನಿವಾಸಿಗಳಿಗೆ ತುರ್ತಾಗಿ ಆಗಬೇಕಿರುವ ವಸತಿ ಸೌಕರ್ಯಗಳು ಹಾಗೂ ಅದಕ್ಕೆ ಅಗತ್ಯವಿರುವ ಹಣಕಾಸಿನ ಕುರಿತು ಚರ್ಚೆ ನಡೆಸಿದರು.
ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಕಾಲೋನಿ ಜಾನಕಿರಾಮ ಬಡಾವಣೆಯಲ್ಲಿನ 684 ಮನೆಗಳಿರುವ ವಸತಿ ಸಂಕೀರ್ಣದ ಬಳಿ ಶುರುವಾದ ಪರಿಶೀಲನಾ ಕಾರ್ಯ, ಕಾಚರಕನಹಳ್ಳಿ ಕೆರೆಯ ಅಂಗಳದ ಕೊಳಗೇರಿ ಪ್ರದೇಶದ 457 ಗುಡಿಸಲುಗಳ ಪರಿಶೀಲನೆಯೊಂದಿಗೆ ಮುಕ್ತಾಯವಾಯಿತು.
ಈ ವೇಳೆ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ವಸತಿ ಇಲಾಖೆಯು ಕರ್ನಾಟಕ ಗೃಹಮಂಡಳಿ ಮೂಲಕ ನಿರ್ಮಿಸಿದ ವಸತಿ ಸಂಕೀರ್ಣದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ಆದಷ್ಟು ಬೇಗ ವಸತಿ ಸೌಕರ್ಯವನ್ನು ಅಭಿವೃದ್ದಿಪಡಿಸಬೇಕಿದೆ. ಈ ನಿಟ್ಟಿನಲ್ಲಿ 684 ಮನೆಗಳನ್ನು ಗುರುತಿಸಿದ್ದು, ತಕ್ಷಣವೇ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ವಿವರಿಸಿದರು.
ಸಚಿವರಿಬ್ಬರು ಕಾಚರಕನಹಳ್ಳಿಗೆ ಹೊಂದಿಕೊಂಡಿರುವ ಕೊಳಗೇರಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ವಸತಿ ಸೌಕರ್ಯದ ಬಗ್ಗೆಯೂ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, “ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಮೂಲದ ಶ್ರಮಿಕ ಜನರೇ ಹೆಚ್ಚಾಗಿ ವಾಸವಿದ್ದಾರೆ. 457 ಕುಟುಂಬಗಳು ಹಲವು ದಶಕಗಳಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಕೆಲವು ವರ್ಷಗಳ ಹಿಂದೆ ಬೆಂಕಿ ಅವಘಡದಲ್ಲಿ ತಮ್ಮ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ವಸತಿ ಇಲಾಖೆಯು ಮತದಾರರ ಗುರುತಿನ ಚೀಟಿಯನ್ನೇ ಪ್ರಮುಖ ದಾಖಲೆ ಎಂದು ಪರಿಗಣಿಸಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ವಸತಿ ಸೌಕರ್ಯ ವಂಚಿತ ಜನರಿಗೆ ಸಮಸ್ಯೆಯಾಗದಂತೆ ಸೂಕ್ತ ಸ್ಥಳದಲ್ಲಿ ವಸತಿ ಸಂಕೀರ್ಣ ನಿರ್ಮಿಸಲಾಗುವುದು ಇಲ್ಲವೇ ವಸತಿ ಇಲಾಖೆಯಲ್ಲಿ ಹಾಲಿ ಇರುವ ಮನೆಗಳನ್ನು ವಸತಿ ರಹಿತರಿಗೆ ನೀಡುವ ಬಗ್ಗೆ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಸತಿ ಯೋಜನೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ನೀಡಾಗುತ್ತಿದೆ. ಜತೆಗೆ ಬ್ಯಾಕ್ ನಿಂದ ಸಾಲ ಸೌಲಭ್ಯವೂ ಸಿಗುತ್ತದೆ. ಹೀಗಾಗಿ ಈ ಎಲ್ಲದರ ವಿವರಗಳ ಬಗ್ಗೆ ಕೂಡಲೇ ಮಾಹಿತಿ ಪಡೆದು ತ್ವರಿತವಾಗಿ ವಸತಿ ಸೌಲಭ್ಯ ಕಲ್ಪಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಚಿವ ಕೆ.ಜೆ.ಜಾರ್ಜ್‌ಗೆ ಧನ್ಯವಾದ ಹೇಳೀದ ಸಚಿವ ಜಮೀರ್
ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕೊಳಗೇರಿ ನಿವಾಸಿಗಳಿಗೆ ವಸತಿ ಮತ್ತು ಮೂಲ ಸೌಕರ್ಯ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ಅವರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಬೇಕಾಗುತ್ತದೆ, ಈ ಹಿನ್ನೆಲೆಯಲ್ಲಿ ವಸತಿ ಇಲಾಖೆ ಸೂಕ್ತ ಸ್ಥಳವೊಂದನ್ನು ಗುರುತಿಸಿ ಕುಡಿಯುವ ನೀರು, ಶೌಚಾಲಯ ಹಾಗೂ ರಕ್ಷಣೆ ಒದಗಿಸುವಂತ ವ್ಯವಸ್ಥೆಯನ್ನು ರೂಪಿಸಬೇಕು. ಇದು ವಸತಿ ಇಲಾಖೆಗೆ ಕೊಳಗೇರಿಗಳನ್ನು ಸ್ಥಳಾಂತರಿಸುವ ಸಮಯದಲ್ಲಿ ತಾತ್ಕಾಲಿಕವಾಗಿ ಬಳಕೆ ಮಾಡಬಹುದು ಎಂದು ಸಲಹೆ ನೀಡಿದರು.
ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಸಚಿವ ಜಾರ್ಜ್ ಅವರು ಒಳ್ಳೆಯ ಸಲಹೆ ನೀಡಿದ್ದಾರೆ ಎಂದರಲ್ಲದೆ, ಅದಕ್ಕಾಗಿ ಧನ್ಯವಾದ ಸಲ್ಲಿಸಿದರು. ಸ್ಥಳದಲ್ಲೇ ಹಾಜರಿದ್ದ ಅಪರ ಜಿಲ್ಲಾಧಿಕಾರಿ ಹಾಗೂ ವಸತಿ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿ ಸ್ಥಳ ಗುರುತಿಸಲು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಜಗದೀಶ್ ನಾಯ್ಕ್ ಗಿಡ್ಡಹಳ್ಳಿ ಸಮೀಪ ನಾಲ್ಕು ಎಕರೆ ಸ್ಥಳಾವಕಾಶವಿದ್ದು, ಅಲ್ಲಿಯೇ ತಾತ್ಕಾಲಿಕ ವ್ಯವಸ್ಥೆ ಮಾಡಬಹುದು ಎಂದು ಹೇಳಿದರು.
ಸಚಿವ ಜಮೀರ್ ಅಹ್ಮದ್ ಮತನಾಡಿ, ಕೂಡಲೇ ಸ್ಥಳವನ್ನು ಪರಿಶೀಲನೆ ನಡೆಸಿ ವಾರದೊಳಗೆ ವರದಿ ಹಾಗೂ ಯೋಜನೆ ಸಿದ್ದಪಡಿಸುವಂತೆ ವಸತಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಚರಕನಹಳ್ಳಿ ಕೆರೆಗೆ ಹೊಸರೂಪ
ಹಲವು ದಶಕಗಳಿಂದ ಸಮಸ್ಯೆಯ ತಾಣವಾಗಿರುವ ಕಾಚರಕನಹಳ್ಳಿ ಕೆರೆಗೆ ಕಾಯಕಲ್ಪ ನೀಡಲು ಇಂಧನ ಸಚಿವರೂ ಆಗಿರುವ ಹಾಗೂ ಸರ್ವಜ್ಞ ನಗರ ಶಾಸಕ ಕೆ.ಜೆ.ಜಾರ್ಜ್ ಮುಂದಾಗಿದ್ದಾರೆ. ಕೆರೆಗೆ ಹೊಂದಿಕೊಂಡಿರುವ ಕೊಳಗೇರಿ ಸ್ಥಳಾಂತರ ಹಾಗೂ ಕೆರೆಗೆ ಸೇರುತ್ತಿರುವ ಮಲಿನ ನೀರನ್ನು ಶುದ್ಧೀಕರಿಸಲು ಘಟಕ ಸ್ಥಾಪನೆ ಮಾಡುವುದರ ಸುಂದರವಾದ ಪಾರ್ಕ್ ನಿರ್ಮಿಸಲು ನೀಲನಕ್ಷೆ ಸಿದ್ದಪಡಿಸಲಾಗಿದೆ. ಇದರ ಮೊದಲ ಹಂತವಾಗಿ ಕೊಳಗೇರಿ ಸ್ಥಳಾಂತರದ ಕುರಿತು ವಸತಿ ಸಚಿವರೊಂದಿಗೆ ಚರಚೆ ನಡೆಸಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಸಚಿವರ ಭೇಟಿ ವೇಳೆ ವಸತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ಅಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪುಲಕೇಶಿ, ಸುಮಿತ್ರ ಮುನಿಕೃಷ್ಣ, ಕಮ್ಮನಹಳ್ಳಿ, ಕಾಚರಕನಹಳ್ಳಿ ಹಾಗೂ ಬಾಣಸವಾಡಿ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದರು.
BREAKING: ಶೇ.50ರಷ್ಟು ರಿಯಾಯಿತಿಯಲ್ಲಿ ‘ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ಅವಕಾಶ: ರಾಜ್ಯ ಸರ್ಕಾರ ಅಧಿಕೃತ ಆದೇಶ
BREAKING : ರಾಜ್ಯ ಸಚಿವ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ








