ಬೆಂಗಳೂರು : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಲೋಕಾಯುಕ್ತ ಭೇಟಿ ವೇಳೆ ಅವಧಿ ಮೀರಿದ ಔಷಧಿಗಳು, ರೋಗಿಗಳಿಗೆ ದಾಖಲಾತಿಗೆ ನಿರಾಕರಿಸಿರುವುದು ಹಾಗೂ ಖಾಸಗಿ ಆಂಬ್ಯುಲೆನ್ಸ್ ಮಾಫಿಯಾ ಹಾವಳಿ ಬೆಳಕಿಗೆ ಬಂದಿದೆ. ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಆಸ್ಪತ್ರೆಯ ನಿರ್ಲಕ್ಷ್ಯವನ್ನು ಖಂಡಿಸಿದ್ದು, ಪ್ರೀಪೇಯ್ಡ್ ಆಂಬ್ಯುಲೆನ್ಸ್ ವ್ಯವಸ್ಥೆ ಜಾರಿಗೆ ತರಲು ಸೂಚಿಸಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ , ವೆಂಟಿಲೇಟರ್ ದೋಷದಿಂದ ಹಾಸಿಗೆಗಳು ಬಳಸಿಲ್ಲ ಎಂದು ಹೇಳಿರುವುದು ಆಸ್ಪತ್ರೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದಿದ್ದಾರೆ. ಪ್ರಕರಣದ ವರದಿಯನ್ನು ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಕಳುಹಿಸಲು ಸೂಚಿಸಲಾಗಿದ್ದು, ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಲಾಗಿದೆ.
ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಮತ್ತು ಮಧ್ಯವರ್ತಿಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಅವರು ವೈದ್ಯರನ್ನು ಸಂಪರ್ಕಿಸಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲು ಒತ್ತಾಯಿಸುತ್ತಿದ್ದರೆಂಬ ಆರೋಪವೂ ಕೇಳಿಬಂದಿದೆ. ಕೆಲವು ಸಿಬ್ಬಂದಿ ಖಾಸಗಿ ಆಂಬ್ಯುಲೆನ್ಸ್ ಬಳಸುವಂತೆ ರೋಗಿಗಳ ಬಂಧುಗಳ ಮೇಲೆ ಒತ್ತಡ ಹೇರಿರುವುದು ತಿಳಿದುಬಂದಿದೆ








