ಬೆಂಗಳೂರು : ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಅಂಗವಾಗಿ ಶಾಂತಿಯುತ ಹಾಗೂ ಮುಕ್ತ ರೀತಿಯಾಗಿ ನಡೆಸುವ ನಿಟ್ಟಿನಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆಗಳು ಹಾಗೂ ಧಾರ್ಮಿಕ ಸ್ಥಳಗಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.
ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನ, ಮಠ, ಮಂದಿರ, ಜೈನ್ ಬಸದಿಗಳು ಹಾಗೂ ಇವುಗಳ ವ್ಯಾಪ್ತಿಗೆ ಒಳಪಡುವ ಭವನ, ಯಾತ್ರಿ ನಿವಾಸ ಪ್ರದೇಶ, ಕಲ್ಯಾಣ ಮಂಟಪಗಳಲ್ಲಿ ಸಭೆ, ಸಮಾರಂಭ ಅಥವಾ ಇನ್ನೀತರೆ ರಾಜಕೀಯ ಚಟುವಟಿಕೆಗಳ ಆಯೋಜನೆಗೆ ಅನುಮತಿ ಇರುವುದಿಲ್ಲ.
ನಿಬಂಧನೆಗಳು:
ರಾಜಕೀಯ ಚಟುವಟಿಕೆಗಳಿಗೆ ದೇವಸ್ಥಾನದ ಕೊಠಡಿಗಳು, ಕಲ್ಯಾಣ ಮಂಟಪ, ಸಮುದಾಯದ ಭವನ, ಖಾಲಿ ಜಾಗ, ದೇವಸ್ಥಾನದ ಆವರಣ, ಇತರೆ ಧಾರ್ಮಿಕ ಸ್ಥಳಗಳನ್ನು ನೀಡಲು ಅವಕಾಶ ಇರುವುದಿಲ್ಲ. ದೇವಸ್ಥಾನಗಳಲ್ಲಿ ವ್ಯಕ್ತಿಗಳು ಯಾವುದೇ ಸಮಾರಂಭ, ಸಭೆ, ಇನ್ನಿತರೆ ರಾಜಕೀಯ ಚಟುವಟಿಕೆಗಳು ನಡೆಸುವಂತಿಲ್ಲ.
ದೇವಸ್ಥಾನ ಆವರಣದಲ್ಲಿ ರಾಜಕೀಯ ವ್ಯಕ್ತಿಗಳಿಂದ ಅನವಶ್ಯಕ ಕಾರ್ಯಕ್ರಮದ ಆಯೋಜನೆಯಲ್ಲಿ ಊಟದ ವ್ಯವಸ್ಥೆ ಮಾಡುವಂತಿಲ್ಲ. ದೇವಸ್ಥಾನ ಧ್ವನಿವರ್ಧಕಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.