ಬೆಂಗಳೂರೂ : ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ರಾಜ್ಯ ಸಮಿತಿಯ ಮೊದಲ ಸಭೆಯಲ್ಲಿ ಹಲವು ಸಂಭಾವ್ಯ ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಿದ್ದು, ಈ ಅಭ್ಯರ್ಥಿಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯ ತಿಳಿಸುವಂತೆ ಸಮಿತಿಯ ಎಲ್ಲ ಸದಸ್ಯರಿಗೆ ಸೂಚಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣಾ ಸಮಿತಿಯ ಮೊದಲ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಈ ತಿಂಗಳ ಅಂತ್ಯದೊಳಗೆ ಕೇಂದ್ರ ಚುನಾವಣಾ ಸಮಿತಿಗೆ ರಾಜ್ಯದ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಅಖೈರುಗೊಳಿಸಿ ಶಿಫಾರಸು ಮಾಡಬೇಕಿದೆ. ಹಾಗಾಗಿ ಇವತ್ತಿನ ಸಭೆಯಲ್ಲಿ ದೆಹಲಿ ವೀಕ್ಷಕರ ಸಮ್ಮುಖದಲ್ಲಿ ಹಲವು ಸಂಭ್ಯಾವ್ಯ ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಿದೆ. ಸಮಿತಿ ಸದಸ್ಯರಿಗೆ ಪ್ರಸ್ತಾಪಿತ ಅಭ್ಯರ್ಥಿಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯ ನೀಡಲು ಹೇಳಿದ್ದೇವೆ.
ಲೋಕಸಭಾ ಚುನಾವಣೆಗೆ ಸಚಿವರ ಸ್ಪರ್ಧೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಕೆಪಿಸಿಸಿಯಿಂದ ಸಿದ್ಧವಾದ ಸಭಾವ್ಯ ಅಭ್ಯರ್ಥಿಗಳ ಪಟ್ಟಿ ಸ್ಕ್ರೀನಿಂಗ್ ಕಮಿಟಿಗೆ ಹೋಗುತ್ತದೆ. ಅಲ್ಲಿಂದ ಕೇಂದ್ರ ಚುನಾವಣಾ ಸಮಿತಿಗೆ ರವಾನೆಯಾಗುತ್ತದೆ. ಕೇಂದ್ರ ಚುನಾವಣಾ ಸಮಿತಿಯು ಯಾರು ಸ್ಪರ್ಧಿಸಬೇಕು ಏನು ಎಂದು ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದರು.
ಹೆಚ್ಚುವರಿ ಡಿಸಿಎಂ ವಿಚಾರ ಪಕ್ಷದ ಮುಂದೆ ಇಲ್ಲ. ಜನರ ಬಳಿಗೆ ನಮ್ಮ ಆಡಳಿತವನ್ನು ತೆಗೆದುಕೊಂಡು ಹೋಗಬೇಕು ಜೊತೆಗೆ ಜನರನ್ನು ಆಡಳಿತದಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಇದಕ್ಕೆ ಅಗತ್ಯ ತಯಾರಿ ಬಗ್ಗೆ ಮಾತ್ರ ಚರ್ಚೆಯಿದೆ. ಡಿಸಿಎಂ ಬಗ್ಗೆ ಇಲ್ಲ ಎಂದು ಹೇಳಿದರು.