ರಾಣೆಬೆನ್ನೂರು: ಕಳೆದ 67 ವರ್ಷಗಳಿಂದ ಯಾರೊಬ್ಬರಿಗೂ ನಗಿಸಲು ಸಾಧ್ಯವಾಗದ ‘ಜೀವಂತ ರತಿ-ಮನ್ಮಥ’ರನ್ನು ನಗಿಸುವ ಸವಾಲು ಈ ಬಾರಿಯೂ ಸಾರ್ವಜನಿಕರ ಮುಂದಿದೆ. ಒಂದು ವೇಳೆ ಇವರನ್ನು ನಗಿಸುವಲ್ಲಿ ಯಶಸ್ವಿಯಾದರೆ ಬರೋಬ್ಬರಿ ₹13 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿದೆ.
ಪ್ರತಿ ವರ್ಷ ಹೋಳಿ ಹಬ್ಬದ ಮುನ್ನಾದಿನದಂದು ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಬಾರಿ ಮಾರ್ಚ್ 3ರಂದು ಸಂಜೆ 6.30 ರಿಂದ ರಾತ್ರಿ 12 ಗಂಟೆಯವರೆಗೆ ನಗರದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ರತಿ ಮತ್ತು ಮನ್ಮಥರ ವೇಷಧಾರಿಗಳನ್ನು ಕೂರಿಸಲಾಗುತ್ತದೆ.
ಕಳೆದ ಆರು ದಶಕಗಳಿಗೂ ಹೆಚ್ಚು ಕಾಲದಿಂದ ಈ ಕಾರ್ಯಕ್ರಮ ನಡೆಯುತ್ತಾ ಬಂದಿದ್ದರೂ, ಈವರೆಗೂ ಯಾರೊಬ್ಬರೂ ಇವರನ್ನು ನಗಿಸಲು ಸಾಧ್ಯವಾಗಿಲ್ಲ. ಜನರು ಇವರನ್ನು ನಗಿಸಲು ನಾನಾ ರೀತಿಯ ಕಸರತ್ತುಗಳನ್ನು, ಹಾಸ್ಯ ಪ್ರದರ್ಶನಗಳನ್ನು ಮಾಡುತ್ತಾರೆ. ಆದರೆ ವೇಷಧಾರಿಗಳು ಮಾತ್ರ ಕಿಂಚಿತ್ತೂ ನಗದೆ ಗಂಭೀರವಾಗಿ ಕುಳಿತು ಎಲ್ಲರ ಪ್ರಯತ್ನವನ್ನು ವಿಫಲಗೊಳಿಸುತ್ತಾ ಬಂದಿದ್ದಾರೆ.
ವೇಷಧಾರಿಗಳ ಪರಿಚಯ:
ಗದಿಗಪ್ಪ ರೊಡ್ಡನವರ: ಕಳೆದ 27 ವರ್ಷಗಳಿಂದ ಮನ್ಮಥನ (ಕಾಮಣ್ಣ) ವೇಷವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ಕುಮಾರ್ ಹಡಪದ: ಕಳೆದ 32 ವರ್ಷಗಳಿಂದ ರತಿ ವೇಷಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶೇಷವೆಂದರೆ, ಈ ಇಬ್ಬರೂ ವ್ಯಕ್ತಿಗಳು ದೈನಂದಿನ ಜೀವನದಲ್ಲಿ ಉತ್ತಮ ಹಾಸ್ಯಪ್ರಜ್ಞೆ ಹೊಂದಿರುವವರಾಗಿದ್ದಾರೆ. ಆದರೆ ವೇದಿಕೆಯ ಮೇಲೆ ವೇಷಧಾರಿಯಾಗಿ ಕುಳಿತಾಗ ಮಾತ್ರ ಅಚಲವಾದ ಗಾಂಭೀರ್ಯ ಪ್ರದರ್ಶಿಸುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಈ ಬಾರಿಯಾದರೂ ಯಾರಾದರೂ ಇವರನ್ನು ನಗಿಸಿ ₹13 ಲಕ್ಷ ಬಹುಮಾನ ಗೆಲ್ಲುತ್ತಾರೆಯೇ ಎಂದು ಕಾದು ನೋಡಬೇಕಿದೆ.








