ಚಾಮರಾಜನಗರ: ಎರಡು ವರ್ಷಗಳ ಆಡಳಿತ ಪೂರೈಸಿರುವ ಕಾಂಗ್ರೆಸ್ ಸರಕಾರದ್ದು ಅರ್ಧಂಬರ್ಧ ಗ್ಯಾರಂಟಿ ಅನುಷ್ಠಾನ, ಭ್ರಷ್ಟಾಚಾರ, ಬೆಲೆ ಏರಿಕೆಗಳೇ ಸಾಧನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕÀ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಿವಾರ್ಯತೆ ಇರುವ ಗ್ಯಾರಂಟಿಗಳನ್ನು ಮಾತ್ರ ಜಾರಿಗೊಳಿಸಿದ್ದಾರೆ. ಅವುಗಳೂ 3 ತಿಂಗಳಿಗೊಮ್ಮೆ ಒಂದು ತಿಂಗಳಿನದ್ದನ್ನು ಕೊಡುತ್ತಿದ್ದಾರೆ. ಉಳಿದುದು ಎಲ್ಲಿ ಹೋಗುತ್ತಿದೆ ಎಂಬುದು ಅವರಿಗೂ ಗೊತ್ತಿಲ್ಲ; ಜನರಿಗೂ ತಿಳಿದಿಲ್ಲ ಎಂದು ಆಕ್ಷೇಪಿಸಿದರು. ಗ್ಯಾರಂಟಿ ಇದುವರೆಗೂ ಸರಿಯಾಗಿ ತಲುಪಿಲ್ಲ ಎಂದು ತಿಳಿಸಿದರು.
ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. ಗುತ್ತಿಗೆದಾರರೇ ಶೇ 60 ಕಮಿಷನ್ ಸರಕಾರ ಎನ್ನುತ್ತಿದ್ದಾರೆ. ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ. ಎಲ್ಲ ಇಲಾಖೆಗಳಲ್ಲೂ ಅದು ಹರಡಿದೆ ಎಂದರು.
ಬೆಳಿಗ್ಗೆ ಎದ್ದು ಕುಡಿಯುವ ಹಾಲಿನಿಂದ ಆರಂಭಿಸಿ ರಾತ್ರಿ ಜನರು ಕುಡಿಯುವ ಆಲ್ಕೋಹಾಲ್ ವರೆಗೆ ಎಲ್ಲದರ ಬೆಲೆ 3 ಸಾರಿ ಹೆಚ್ಚಾಗಿದೆ. ಹಾಲಿನ ಬೆಲೆ 9 ರೂ. ಏರಿಸಿದರೂ ರೈತರಿಗೆ ಕೊಟ್ಟಿಲ್ಲ; ಆಲ್ಕೋಹಾಲ್ ದರ ಪ್ರತಿ ತಿಂಗಳೂ ಏರುತ್ತಿದೆ. 2 ಸಾವಿರ ರೂ. ಕೊಡುವುದಾಗಿ ಬೀಗಿ ಬೀಗಿ ಹೇಳುತ್ತಾರೆ. ಪ್ರತಿ ಕುಟುಂಬದಿಂದ 20 ಸಾವಿರ ರೂ. ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಗೆ ಎಷ್ಟು ಬಂದಿದೆ? ಮಾಹಿತಿ ಕೊಡಲು ಸವಾಲು..
ಪರಿಶಿಷ್ಟ ಜಾತಿ ವರ್ಗಗಳ ಏಳಿಗೆಗೆ ಬಜೆಟ್‍ನಲ್ಲಿ 42 ಸಾವಿರ ಕೋಟಿ ಇಟ್ಟಿದ್ದಾಗಿ ತೋರಿಸಿದ್ದಾರೆ. 42 ಸಾವಿರ ಕೋಟಿಯಲ್ಲಿ ಈ ಜಿಲ್ಲೆಗೆ ಎಷ್ಟು ಬಂದಿದೆ? ಇಲ್ಲಿನ ಅಭಿವೃದ್ಧಿಗೆ ಸಿಕ್ಕಿದ ಹಣ ಎಷ್ಟು? ಯಾವ ಪರಿಶಿಷ್ಟ ಜಾತಿ ವರ್ಗಗಳವರಿಗೆ ಅದು ಸಿಕ್ಕಿದೆ ಎಂಬ ವಿವರವನ್ನು ಇಲ್ಲಿನ ಸಚಿವರು, ಸಂಸದರು ನೀಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದರು. 42 ಸಾವಿರ ಕೋಟಿಯಲ್ಲಿ ಶೇ 50ರಷ್ಟನ್ನು ಎಲ್ಲ ಇಲಾಖೆಗಳಿಗೆ ಕೊಡಬೇಕಿತ್ತು. ಅದರಲ್ಲಿ ದಲಿತರಿಗೆ ಒಂದು ರೂ. ಸಿಗುವುದಿಲ್ಲ ಎಂದು ಟೀಕಿಸಿದರು.
ಉಳಿದ 21 ಸಾವಿರ ಕೋಟಿಯಲ್ಲಿ ನೀವು ಗ್ಯಾರಂಟಿಗಳನ್ನು ದಲಿತರಿಗೆ ಕೊಟ್ಟಿಲ್ಲ; ಮೊದಲು ಎಲ್ಲರಿಗೂ ಫ್ರೀ ಎಂದಿದ್ದರು. ನಿಮಗೂ, ನಿಮ್ಮ ಹೆಂಡತಿಗೂ ಉಚಿತ ಇರಬಹುದು; ಕಾಕಾ ಪಾಟೀಲ್‍ಗೂ ಉಚಿತ ಇರಬಹುದು. ಆದರೆ, ಎಸ್‍ಸಿ ಸಮುದಾಯದ ಮಹದೇವಪ್ಪನಿಗೆ ಯಾಕೆ ಫ್ರೀ ಇಲ್ಲ ಎಂದು ಪ್ರಶ್ನಿಸಿದರು. 21 ಸಾವಿರ ಕೋಟಿಯಲ್ಲಿ 14 ಸಾವಿರ ಕೋಟಿಯನ್ನು ಗ್ಯಾರಂಟಿಗೆ ಬಳಸಿದ್ದಾರೆ. ಅದು ಪರಿಶಿಷ್ಟ ಜಾತಿ ವರ್ಗಗಳ ಅಭಿವೃದ್ಧಿಗೆ ಇಟ್ಟಿದ್ದ ಹಣ. ಅಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸಿದರು. ಇದು ದಲಿತರಿಗೆ ಮಾಡಿದ ಮೋಸ ಮತ್ತು ಅನ್ಯಾಯ ಎಂದು ಆಕ್ಷೇಪಿಸಿದರು.
ಉಳಿದಿದ್ದೆಷ್ಟು ಕೇವಲ 7 ಸಾವಿರ ಕೋಟಿ. ಇದಿಷ್ಟರಿಂದ ಅಭಿವೃದ್ಧಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಎಚ್.ಸಿ.ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರೇ ಆಗಿದ್ದಾರೆ. ದಲಿತರ ಹಣ ದಲಿತರ ಅಭಿವೃದ್ಧಿಗೆ ನೀಡುತ್ತಿಲ್ಲ; ದಲಿತರಿಗೆ ದೋಖಾ ಆಗುತ್ತಿದೆ ಎಂದು ದೂರಿದರು.
ಇದು ಸಾಧನಾ ಸಮಾವೇಶ ಅಲ್ಲ; ವೇದನೆಯ ಸಮಾವೇಶ
ಸರಕಾರದ 2 ವರ್ಷದ ಸಂಬಂಧ ದೊಡ್ಡ ಸಂಭ್ರಮಾಚರಣೆಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಇದು ಸಾಧನಾ ಸಮಾವೇಶ ಅಲ್ಲ; ಜನರಿಗೆ ಕೊಟ್ಟ ವೇದನೆಯ ಸಮಾವೇಶ ಎಂದು ಟೀಕಿಸಿದರು. ಅಭಿವೃದ್ಧಿ ಇಲ್ಲದೇ ಸಾಧನೆ ಎಲ್ಲಿಂದ ಬರಲು ಸಾಧ್ಯ ನಿಮಗೆ ಎಂದು ಕೇಳಿದರು. ಸಾಧನೆಯ ಸಮಾವೇಶದ ಬದಲಾಗಿ ನೀವು ವೇದನೆಯ ಸಮಾವೇಶ ಮಾಡಿ ಎಂದು ಸಲಹೆ ನೀಡಿದರು.
ಸಂಭ್ರಮಾಚರಣೆಗೆ ಪವಿತ್ರ ಸ್ಥಳ ಹಂಪಿಗೆ ಹೋಗಿದ್ದೀರಿ. ವಿಜಯನಗರ ಸಾಮ್ರಾಜ್ಯ ರಾಜರು ಆಳಿದ ಸ್ಥಳವಿದು. ಅಲ್ಲಿಗೆ ಹೋಗಿ ಜನರಿಗೆ ಮೋಸ ಮಾಡಿದ್ದು, ವಂಚಿಸಿದ್ದನ್ನು ಅಲ್ಲಿ ಸಂಭ್ರಮಾಚರಣೆ ಮಾಡಲು ಹೋಗುತ್ತೀರಿ ಎಂದು ವಾಗ್ದಾಳಿ ನಡೆಸಿದರು. ಬೆಲೆ ಏರಿಕೆ ಬಗ್ಗೆ ಮಾತನಾಡಿ ನೋಡೋಣ; ಯಾವ್ಯಾವ ಜನರಿಗೆ ಅನ್ಯಾಯ ಮಾಡಿದ್ದೀರೆಂದು ಅಲ್ಲಿ ಹೇಳಿ ಎಂದು ಸವಾಲು ಹಾಕಿದರು. ಭ್ರಷ್ಟಾಚಾರದ ಬಗ್ಗೆ ಹೇಳಿಕೊಳ್ಳಿ ಎಂದರು.
ಬ್ರ್ಯಾಂಡ್ ಬೆಂಗಳೂರು ಬ್ರ್ಯಾಂಡಿ ಬೆಂಗಳೂರು ಆಗಿದೆ..
ಅಭಿವೃದ್ಧಿಯೇ ಮಾಡದಿದ್ದರೆ ಗ್ರೇಟರ್ ಬೆಂಗಳೂರು ಹೇಗೆ ಆಗಲು ಸಾಧ್ಯ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಮೊದಲು ಬ್ರ್ಯಾಂಡ್ ಬೆಂಗಳೂರು ಎಂದಿರಿ. ಅದು ಬ್ರ್ಯಾಂಡಿ ಬೆಂಗಳೂರು ಆಗಿ ಹೋಗಿದೆ ಎಂದು ಟೀಕಿಸಿದರು. ಈಗ ಗ್ರೇಟರ್ ಬೆಂಗಳೂರು ಎನ್ನುತ್ತಿದ್ದೀರಿ. ಇದು ಗ್ರೇಟರ್ ಮಿಸ್ಟೇಕ್ ಆಫ್ ಕಾಂಗ್ರೆಸ್ ಎಂದು ಆಕ್ಷೇಪಿಸಿದರು.
ಖರ್ಗೆಯವರೆಂದರೆ ನಿಮಗೆ ಇಷ್ಟು ನಡುಕವೇ?
ಒಂದೆಡೆ ದುಡ್ಡಿಲ್ಲ; ಖರ್ಗೆಯವರ ಶಾಲೆ ಕಾಂಪೌಂಡ್, ಶೌಚಾಲಯ ಕಟ್ಟಲು 9.90 ಕೋಟಿ ಕೊಟ್ಟಿದ್ದೀರಿ. ಯೋಜನೆ ಇಲ್ಲ; ಮುಖ್ಯಮಂತ್ರಿಗಳೇ ಎಐಸಿಸಿ ಅಧ್ಯಕ್ಷ ಖರ್ಗೆಯವರನ್ನು ಕಂಡರೆ ಅಷ್ಟು ನಡುಕ ಹುಟ್ಟಿದೆಯೇ ನಿಮಗೆ ಎಂದು ಕೇಳಿದರು. ಅವರ ಮಗ ದೊಡ್ಡ ಮಾತನಾಡುತ್ತಾರೆ. ತಂದೆ ವಿಪಕ್ಷ ನಾಯಕರು, ಮಾವ ಸಂಸದರು, ಅಣ್ಣ, ತಾಯಿ ಸೇರಿದ ಕುಟುಂಬದ ಸಂಸ್ಥೆಗೆ ಏರ್‍ಪೋರ್ಟ್ ಪಕ್ಕದಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡಿದ್ದರು. ರಾತ್ರೋರಾತ್ರಿ ಹೊಡೆದುಕೊಂಡರು. ನಾವು ಕೇಳಿದ ಮೇಲೆ ಪಟ್ಟಂತ ರಾತ್ರಿ ವಾಪಸ್ ಕೊಟ್ಟರು ಎಂದು ಟೀಕಿಸಿದರು.
ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟಲು ಹಣವನ್ನೂ ನೀಡುತ್ತಿಲ್ಲ. ಆದರೆ, ಶಾಲೆ ನಡೆಸುವವರು ಶೌಚಾಲಯ ಕಟ್ಟಿಸಬಹುದಲ್ಲವೇ? ಕಾಂಪೌಂಡ್ ಅರ್ಜೆಂಟ್ ಇತ್ತೇ? ಎಂದು ಕೇಳಿದರು. ಈ ಸರಕಾರವು ಭ್ರಷ್ಟಾಚಾರಕ್ಕೆ ಆದ್ಯತೆ ಕೊಡುತ್ತಿದೆ ಎಂದು ಆರೋಪಿಸಿದರು.
GOOD NEWS: ರಾಜ್ಯದ ಜನತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್: ‘ಭೂ ಗ್ಯಾರಂಟಿ ಯೋಜನೆ’ ಜಾರಿ
ಸಾರ್ವಜನಿಕರೇ ಗಮನಿಸಿ : ನಿಮ್ಮ `ಮೊಬೈಲ್’ ಕಳ್ಳತನವಾದ್ರೆ ಚಿಂತೆಬೇಡ, ಜಸ್ಟ್ ಈ ರೀತಿ ಮಾಡಿ.!