ಬೆಂಗಳೂರು: ಮುಂಬರುವ ವಾರಾಂತ್ಯದಲ್ಲಿ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಬಿಸಿಲಿನ ತಾಪದಿಂದ ತಾತ್ಕಾಲಿಕ ವಿರಾಮ ಪಡೆಯುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ, ಬಹುತೇಕ ಎಲ್ಲಾ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಗಮನಾರ್ಹ ಕುಸಿತವಾಗಲಿದೆ ಎಂದು ಭವಿಷ್ಯ ನುಡಿದಿದೆ.
ರಾಜ್ಯದ ಅನೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವು ಹಲವಾರು ಡಿಗ್ರಿಗಳಷ್ಟು ಕುಸಿದಿದೆ. ಕಲಬುರಗಿಯಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿದ್ದು, ಗರಿಷ್ಠ ಉಷ್ಣಾಂಶ 41.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಅಸಾಧಾರಣ ಬೇಸಿಗೆಯನ್ನು ಎದುರಿಸುತ್ತಿರುವ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದ್ದರಿಂದ ಉಷ್ಣತೆಯಲ್ಲಿ ಕುಸಿತ ಕಂಡುಬಂದಿದೆ.
ಏಪ್ರಿಲ್ 6 ರಂದು, ನಗರದಲ್ಲಿ ಗರಿಷ್ಠ ತಾಪಮಾನ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು 2016 ರ ನಂತರ ಎರಡನೇ ಅತಿ ಹೆಚ್ಚು ಮತ್ತು 15 ವರ್ಷಗಳಲ್ಲಿ ಮೂರನೇ ಅತಿ ಹೆಚ್ಚು ತಾಪಮಾನವಾಗಿದೆ.
ಕಲಬುರಗಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಉತ್ತರ ಕನ್ನಡ, ಗದಗ, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿಯಲ್ಲಿ ಬಿಸಿಗಾಳಿ ಮುಂದುವರಿಯಲಿದ್ದು, ಕಳೆದ ವಾರದಷ್ಟು ಪರಿಸ್ಥಿತಿ ಕೆಟ್ಟದಾಗಿರುವುದಿಲ್ಲ ಎಂದು ಐಎಂಡಿ ಬೆಂಗಳೂರಿನ ವಿಜ್ಞಾನಿ ‘ಡಿ’ ಎ ಪ್ರಸಾದ್ ಹೇಳಿದ್ದಾರೆ. “ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿಗಿಂತ ಹೆಚ್ಚಾಗುವುದಿಲ್ಲ. ವಾಸ್ತವವಾಗಿ, ಅದು ಕುಸಿಯುವ ನಿರೀಕ್ಷೆಯಿದೆ” ಎಂದು ಅವರು ತಿಳಿಸಿದರು.
ಕರಾವಳಿ ಕರ್ನಾಟಕವು ಬಿಸಿ ಮತ್ತು ಆರ್ದ್ರವಾಗಿರುತ್ತದೆ ಎಂದು ಅವರು ಹೇಳಿದರು. ಏಪ್ರಿಲ್ 12 ಮತ್ತು 13 ರಂದು ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಲಘು ಮಳೆ (15 ಮಿ.ಮೀ ಅಥವಾ ಅದಕ್ಕಿಂತ ಕಡಿಮೆ) ಚಿಕ್ಕಮಗಳೂರು, ಕೊಡಗು, ಮೈಸೂರು, ಗದಗ ಮತ್ತು ಬೆಳಗಾವಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಏಪ್ರಿಲ್ ಮೂರನೇ ಅಥವಾ ನಾಲ್ಕನೇ ವಾರದ ವೇಳೆಗೆ ಪೂರ್ವ ಮುಂಗಾರು ಮಳೆ ಬೆಂಗಳೂರಿಗೆ ಅಪ್ಪಳಿಸಲಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಮುಂದುವರಿಯಲಿದೆ.