ಚಿತ್ರದುರ್ಗ : ಚಿತ್ರದುರ್ಗ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ನಟ ದರ್ಶನ್ ಮತ್ತು ಏಳು ಆರೋಪಿ ಗಳ ಜಾಮೀನು ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದೆ. ಗೆಳೆಯ ರೇಣುಕಾ ಸ್ವಾಮಿ ಪತ್ನಿ ಸಹನಾ ಪ್ರತಿಕ್ರಿಯೆ ನೀಡಿ, ಯಾರು ತಪ್ಪು ಮಾಡಿದ್ದಾರೊ ಅವರಿಗೆ ಶಿಕ್ಷೆ ಆಗಲಿ ಎಂದು ಪ್ರತಿಕ್ರಿಯಿಸಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ತಪ್ಪು ಮಾಡಿದ್ದಾರೊ ಅವರಿಗೆ ಶಿಕ್ಷೆ ಆಗಲಿ, ಕಾನೂನಲ್ಲಿ ಏನು ಶಿಕ್ಷೆ ಕೊಡುತ್ತಾರೆ ಗೊತ್ತಿಲ್ಲ ಎಲ್ಲ ದೇವರ ಕೈಯಲ್ಲಿದೆ. ಕಾನೂನಿನಲ್ಲಿ ಯಾರಿದ್ದರೇನು ಎಲ್ಲರೂ ಸಮಾನರು ಎಂದರು. ಇನ್ನು ರೇಣುಕಾಸ್ವಾಮಿ ತಾಯಿ ಮಾತನಾಡಿ, ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ತಲೆಬಾಗಲೇಬೇಕು ಈ ಒಂದು ಪ್ರಕರಣದಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಮಗನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಸಂತೋಷ ಪಡಬಹುದು ಅಷ್ಟೆ. ಆರೋಪಿಗಳಿಗೆ ಏನು ಶಿಕ್ಷೆ ಆಗುತ್ತೋ ಅದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದು ರೇಣುಕಾಸ್ವಾಮಿ ತಾಯಿ ತಿಳಿಸಿದರು.
ಇದೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತಂದೆ ಕಾಶಿನಾಥಯ್ಯ, ಈ ದಿನ ದರ್ಶನ್ ಬೇಲ್ ಅಪ್ಲಿಕೇಶನ್ ಸುಪ್ರೀಂ ಕೋರ್ಟ್ ರದ್ದಾಗಿದೆ. ಅವರನ್ನು ಮತ್ತೆ ಜೈಲಿಗೆ ಕಳುಹಿಸಿದ್ದು, ನಮಗೆ ನ್ಯಾಯದ ಮೇಲೆ ಇನ್ನೂ ಹೆಚ್ಚಿನ ನಂಬಿಕೆ ಬಂದಿದೆ. ಹೈಕೋರ್ಟ್ ನಲ್ಲಿ ಅವರಿಗೆ ಬೇಲ್ ಸಿಕ್ಕಾಗ ನಮಗೆ ಆತಂಕ ಇತ್ತು. ಆದರೆ ಸರ್ಕಾರದವರು ದೊಡ್ಡ ಮನಸು ಮಾಡಿ ವಿಶೇಷ ತನಿಖೆ ಎಂದು ಸುಪ್ರೀಂ ಕೋರ್ಟಿಗೆ ಜಾಮೀನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಇದೀಗ ನ್ಯಾಯಮೂರ್ತಿಗಳು ಜಾಮೀನು ರದ್ದುಗೊಳಿಸಿದೆ. ಸರ್ಕಾರದ ಬಗ್ಗೆ ಮತ್ತು ನ್ಯಾಯಾಂಗದ ಬಗ್ಗೆ ನಮಗೆ ಇನ್ನೂ ಹೆಚ್ಚು ವಿಶ್ವಾಸ ನಂಬಿಕೆ ಇದೆ ಎಂದು ಕಣ್ಣೀರಿಡುತ್ತಾ ಹೇಳಿದರು.