ಹಾವೇರಿ: ಜನವರಿ 6ರಂದು ಜಿಲ್ಲೆಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಹಂದಿ ಮುಕ್ತ ನಗರವನ್ನಾಗಿ ಮಾಡಲು ಹಾವೇರಿ ನಗರಸಭೆ ಮುಂದಾಗಿದೆ. ಹಂದಿಗಳನ್ನು ತೆರವುಗೊಳಿಸಲು ಹಾವೇರಿ ನಗರಸಭೆ (CMC) ಅಧಿಕಾರಿಗಳು ಹಂದಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಈಗಾಗಲೇ 1,000ಕ್ಕೂ ಹೆಚ್ಚು ಹಂದಿಗಳನ್ನು ನಗರದಿಂದ ಹೊರಹಾಕಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಹಂದಿಗಳ ಕಾಟ ಹೆಚ್ಚಾಗಿದೆ. ಕಳೆದ ತಿಂಗಳು ಸಿಎಂಸಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಂದಿ ಮಾಲೀಕರಿಗೆ ನೋಟಿಸ್ ನೀಡಿ 15 ದಿನಗಳಲ್ಲಿ ನಗರದಿಂದ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಇತ್ತೀಚಿನ ಸಭೆಯಲ್ಲಿ ಗಡುವನ್ನು ಪೂರೈಸಲು ಮಾಲೀಕರು ವಿಫಲವಾದರೆ ಸಿಎಂಸಿ ಹಂದಿ ಹಿಡಿಯುವ ಅಭಿಯಾನವನ್ನು ಪ್ರಾರಂಭಿಸುತ್ತದೆ ಎಂದು ಎಚ್ಚರಿಸಿದ್ದರು.
ಕೆಲವು ಹಂದಿ ಮಾಲೀಕರು ತಮ್ಮ ಹಂದಿಗಳನ್ನು ಸ್ಥಳಾಂತರಿಸಿದ್ದಾರೆ. ಆದರೆ ಒಂದಷ್ಟು ಮಾಲೀಕರು ನಗರಸಭೆಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಡಾಡಿ ಹಂದಿಗಳಿಂದ ಮುಕ್ತ ನಗರವಾಗಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ. ಹಂದಿ ಮಾಲೀಕರ ವಿರೋಧದ ನಡುವೆಯೂ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ನಗರದ 31 ವಾರ್ಡ್ಗಳಲ್ಲಿ ಸುಮಾರು 2,500 ಹಂದಿಗಳು ಇವೆ ಎಂದು ಅಂದಾಜಿಸಲಾಗಿದೆ.
ಹಾವೇರಿಯಲ್ಲಿ ಹಂದಿಗಳ ಹಾವಳಿ ವಿಪರೀತ ಹೆಚ್ಚಾಗಿದೆ. ನಗರದ ಹಲವೆಡೆ ಮಕ್ಕಳ ಮೇಲೆ ದಾಳಿ ನಡೆಸಿವೆ. ನಾವು ಈಗಾಗಲೇ ಹಂದಿ ಮಾಲೀಕರೊಂದಿಗೆ ನೋಟಿಸ್ಗಳನ್ನು ನೀಡಿದ್ದೇವೆ ಮತ್ತು ಒಂದೆರಡು ಸಭೆಗಳನ್ನು ನಡೆಸಿದ್ದೇವೆ. ಹಂದಿಗಳನ್ನು ನಗರದಿಂದ ಸ್ಥಳಾಂತರಿಸುವಂತೆ ಅವರಿಗೆ ಮನವರಿಕೆ ಮಾಡಿಕೊಟ್ಟು 15 ದಿನಗಳ ಗಡುವು ನೀಡಿದ್ದೇವೆ.
ಆರಂಭದಲ್ಲಿ ಕೆಲವು ಮಾಲೀಕರು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರೂ ಮನವರಿಕೆ ಮಾಡಿಕೊಡಲಾಗಿದೆ. ಗಡುವು ಮುಕ್ತಾಯದ ನಂತರ ಸಿಎಂಸಿ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸಲಿದೆ ಎಂದು ಸಿಎಂಸಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದ್ದಾರೆ.
ಜನವರಿ 6-8 ರವರೆಗೆ ನಗರದಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಮೊದಲು ನಗರವು ಬಿಡಾಡಿ ಹಂದಿಗಳಿಂದ ಮುಕ್ತವಾಗಲಿದೆ. ರಾಜ್ಯದ ವಿವಿಧೆಡೆಯಿಂದ 3ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮಕ್ಕೆ ಬರುವುದು ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಹಂದಿಗಳ ಹಾವಳಿಯಿಂದ ಜನರು ವೈರಲ್ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈಗ ಸಿಎಂಸಿ ಕ್ರಮದಿಂದ ನಮಗೆ ಪರಿಹಾರ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ. ಹಾವೇರಿ ಶೀಘ್ರದಲ್ಲೇ ಹಂದಿ ಮುಕ್ತವಾಗಲಿ ಎಂದು ನಾವು ಬಯಸುತ್ತೇವೆ ಎಂದು ಮಂಜುನಾಥ ನಗರದ ನಿವಾಸಿ ಮಲ್ಲಿಕಾರ್ಜುನ ದಬ್ಬಣ್ಣನವರ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.