ನವದೆಹಲಿ: ಸಂವಿಧಾನವನ್ನು ಆಧಾರವಾಗಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಇದೀಗ, ತನ್ನ ಪಕ್ಷವನ್ನು ಬಲಗೊಳಿಸಲು ವಿಶೇಷ ವೇದಿಕೆಯನ್ನು ಸಿದ್ಧಗೊಳಿಸುತ್ತಿದೆ. ಈ ಸಂಬಂಧ ಕಾರ್ಯತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಬೃಹತ್ ರಾಲಿಯೊಂದನ್ನು ನಡೆಸಲು ನಿರ್ಧರಿಸಿದೆ. ಈ ಸಂಬಂಧ ಪ್ರದೇಶ ಕಾಂಗ್ರೆಸ್ ನಾಯಕರನ್ನು ಒಳಗೊಂಡ ಕಾನೂನು ತಜ್ಞರೊಂದಿಗೆ ಹೈಕಮಾಂಡ್ ನಾಯಕರು ಬುಧವಾರ (ಜ.07) ದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಸಿದರು.
KPCC ಕಾನೂನು ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ, ಮಾಜಿ ಸರ್ಕಾರಿ ವಕೀಲರೂ ಆದ ದಕ್ಷಿಣ ಕನ್ನಡ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಮನೋರಾಜ್ ರಾಜೀವ್, ಕರ್ನಾಟಕ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಬಾಬು, ಮುನಿಯಪ್ಪ ಮೊದಲಾದ ಕಾನೂನು ತಜ್ಞರನ್ನು ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿತ್ತು.
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಿರ್ದೇಶನದಂತೆ ಸಂಸದ ಅಭಿಷೇಕ್ ಮನು ಸಿಂಘ್ವಿ ಹಾಗೂ ಸಲ್ಮಾನ್ ಖುರ್ಷಿದ್ ಅವರು ಕರ್ನಾಟಕದ ಈ ನಾಯಕರ ಜೊತೆ ಇಡೀ ದಿನ ಸರಣಿ ಸಭೆಗಳನ್ನು ನಡೆಸಿದರು. ದೇಶದ ಎಲ್ಲೆಡೆ ಕಾನೂನು ಘಟಕಗಳನ್ನು ಬಲಗೊಳಿಸಬೇಕು, ದೇಶದ ಎಲ್ಲಾ ವಕೀಲರ ಕುರಿತು ಡೈರೆಕ್ಟರಿ ರಚನೆಯಾಗಬೇಕು. ಈ ಸಂಬಂಧ ಸಮರ ಸಜ್ಜಿನಲ್ಲಿ ಕೆಲಸ ಮಾಡುವ ಬಗ್ಗೆ ನಾಯಕರು ಮಾರ್ಗದರ್ಶನ ನೀಡಿದರು.
ಮಂಗಳೂರಿನಲ್ಲಿ ಬೃಹತ್ ಕಾನೂನು ಸಮಾವೇಶ:
ಕರ್ನಾಟಕದಲ್ಲಿ ಕಾಂಗ್ರೆಸ್ ಕಾನೂನು ಘಟಕದ ನೇತೃತ್ವದಲ್ಲಿ ವಕೀಲರ ಬೃಹತ್ ಸಮಾವೇಶ ನಡೆಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಕುರಿತಂತೆ ದೆಹಲಿಯಲ್ಲಿ ಮಾಹಿತಿ ನೀಡಿದ CM ಧನಂಜಯ ಹಾಗೂ ಮನೋರಾಜ್ ರಾಜೀವ್, ಈ ತಿಂಗಳ ಅಂತ್ಯದಲ್ಲಿ ಮಂಗಳೂರಿನಲ್ಲಿ ವಕೀಲರ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಿದರು.
ಜನವರಿ 24ರಂದು ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲ, ರಾಜ್ಯದ ವಿವಿಧ ಜಿಲ್ಲೆಗಳ ವಕೀಲರು, ಕಾನೂನು ಘಟಕಗಳ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮನೋರಾಜ್ ರಾಜೀವ್ ತಿಳಿಸಿದರು.
ಈ ಸಮಾವೇಶವು ಕೆಪಿಸಿಸಿ ನೇತೃತ್ವದಲ್ಲೇ ನಡೆಯಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿಯ ಎಲ್ಲಾ ತಾಲೂಕುಗಳ ಕಾನೂನು ಘಟಕಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹಿತ ರಾಜ್ಯದ ಸಚಿವರು, ಹಿರಿಯ ನಾಯಕರು ಹಾಗೂ ಎಐಸಿಸಿ ನಾಯಕರು ಕೂಡಾ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ನಾಯಕರ ಪಟ್ಟಿಯನ್ನು ಎಐಸಿಸಿ ಸದ್ಯದಲ್ಲೇ ಪ್ರಕಟಿಸಲಿದೆ ಎಂದು ಮನೋರಾಜ್ ರಾಜೀವ್ ತಿಳಿಸಿದರು.
ಮಂಡ್ಯದಲ್ಲಿ ಪೊಲೀಸ್ ಠಾಣೆ ಹಿಂದಿನ ವಿಶ್ರಾಂತಿ ಗೃಹದಲ್ಲೇ ಪೇದೆ ಆತ್ಮಹತ್ಯೆ








