ಬೆಂಗಳೂರು : ರವಿಶಂಕರ್ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲದೆ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ರವಿಶಂಕರ್ ವಿರುದ್ಧದ ಭೂ ಕಬಳಿಕೆ ಪ್ರಕರಣವನ್ನು ರದ್ದುಪಡಿಸಿದೆ. ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ 19 ಸೆಪ್ಟೆಂಬರ್ 2025ರಂದು ಕರ್ನಾಟಕ ಭೂ ಆದಾಯ ಕಾಯ್ದೆ 1964 ಅಡಿಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿತ್ತು. ಕಾಗ್ಗಳಿಪುರ ಗ್ರಾಮದ ವಿವಿಧ ಸರ್ವೇ ಸಂಖ್ಯೆಗಳಲ್ಲಿನ ಸರ್ಕಾರಿ ಭೂಮಿ, ಕೆರೆ ಮತ್ತು ರಾಜಕಾಲುವೆ ಅಕ್ರಮವಾಗಿ ಕಬಳಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಪಿಐಎಲ್, ಲ್ಯಾಂಡ್ ಗ್ರಾಬಿಂಗ್ ವಿಶೇಷ ನ್ಯಾಯಾಲಯದ ವಿಚಾರಣೆ ಮತ್ತು ತಹಶೀಲ್ದಾರ್ ವರದಿ ಆಧರಿಸಿ ದೂರು ದಾಖಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಶ್ರೀ ಶ್ರೀ ರವಿಶಂಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್ ದೂರುದಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲವೆಂದು ಗಮನಿಸಿದೆ. ಹೀಗಾಗಿ ಕೇವಲ ಪ್ರತಿವಾದಿಯಾಗಿ ಹೆಸರು ಸೇರಿಸಿರುವುದನ್ನು ಆಧಾರವನ್ನಾಗಿಟ್ಟುಕೊಂಡು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಾಥಮಿಕ ಸಾಕ್ಷ್ಯಗಳಿಲ್ಲದೆ ಪ್ರಕರಣ ಮುಂದುವರಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯವು ಗುರೂಜಿ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.








