ಬೆಂಗಳೂರು : ಬಿಜೆಪಿ ಜೆಡಿಎಸ್ ಮಧ್ಯ ಮೈತ್ರಿ ಕೇವಲ ಹೆಸರಿಗಷ್ಟೇ ಆದಂತಾಗಿದೆ. ಏಕೆಂದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಈ ವಿಚಾರವಾಗಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ನಮ್ಮದು ಒನ್ ಸೈಡ್ ಲವ್ ಆಗಿದೆ. ನಾವು ಬಿಜೆಪಿಯನ್ನು ಪ್ರೀತಿಸುತ್ತೇವೆ, ಆದರೆ ಅವರು ನಮ್ಮನ್ನು ಇಷ್ಟಪಡಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಹೌದು ಶಾಸಕ ಶರಣಗೌಡ ಕಂದಕೂರು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ರೆ 140-150 ಸ್ಥಾನ ಬರುತ್ತೆ. ಮೈತ್ರಿ ಇದ್ದರೂ ಇಲ್ಲದಿದ್ದರೂ ನಮ್ಮ ಸಿಎಂ ಅಭ್ಯರ್ಥಿ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿಯವರು ನಿಮ್ಮ ಪಕ್ಷದ ಸಿಎಂ ಅಭ್ಯರ್ಥಿ ಯಾರು ಎಂದು ಹೇಳಿ. ನಮ್ಮದು ಒಂದು ಸೈಡ್ ಲವ್ ಆಗಿದೆ. ನಾವು BJPಯವರನ್ನು ಪ್ರೀತಿಸುತ್ತೇವೆ, ಆದರೆ ಅವರು ನಮ್ಮನ್ನ ಪ್ರೀತಿಸ್ತಿಲ್ಲ. ಸಮನ್ವಯತೆಯಿಂದ ಹೋಗಿದ್ದಕ್ಕೆ MP ಚುನಾವಣೆಯಲ್ಲಿ 19 ಸ್ಥಾನ ಗೆದ್ವಿ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಲಿ ಎಂದು ರಾಜ್ಯದ ಜನ ಬಯಸುತ್ತಿದ್ದಾರೆ. ಅವರನ್ನು ನೋಡಿ ನಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ. ಸಿಎಂ ಬಗ್ಗೆ ಮೋದಿ ತೀರ್ಮಾನ ಮಾಡ್ತಾರೆಂದು ದೇವೇಗೌಡರು ಹೇಳಿದ್ದಾರೆ. ಆದರೆ ನಾವು ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುತ್ತೇವೆ. ಸಿಎಂ ಅಭ್ಯರ್ಥಿ ಬಗ್ಗೆ ಸರ್ವೆ ಮಾಡಿಸಿ ಬಿಜೆಪಿಯವರು ತೀರ್ಮಾನಿಸಲಿ ಎಂದು ಶಾಸಕ ಶರಣಗೌಡ ಕಂದಕೂರು ತಿಳಿಸಿದ್ದಾರೆ.








