ಮಂಡ್ಯ : ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲನ್ನು ಸಮರ್ಪಕವಾಗಿ ಕೊಟ್ಟಿದ್ದರೆ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಅನುಕೂಲವಾಗುತ್ತಿತ್ತು ಎಂದು ಶಾಸಕ ಕೆ.ಎಂ.ಉದಯ್ ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರುದೇವರಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಾವೇರಿ ನೀರಾವರಿ ನಿಗಮದ ವತಿಯಿಂದ ಸೂಳೆಕೆರೆ ನಾಲೆಗಳ ಆಧುನಿಕರಣ ಕಾಮಗಾರಿಗೆ ಅಂದಾಜು 48 ಕೋಟಿ ರೂ ವೆಚ್ಚದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ದೇಶದಲ್ಲೇ ತೆರಿಗೆ ಪಾವತಿ ಮಾಡುವಲ್ಲಿ ರಾಜ್ಯ ಸರ್ಕಾರ ಎರಡನೇ ಸ್ಥಾನದಲ್ಲಿದೆ ಆದರೂ ಸಹ ನಮ್ಮ ಪಾಲಿನ ಜಿಎಸ್ ಟಿ ಅನುದಾನ ಬಿಡುಗಡೆ ಮಾಡುವಲ್ಲಿಯೂ ವಂಚನೆ ಮಾಡುತ್ತಿದೆ. ಇದರ ಜೊತೆಗೆ ಜೆಜೆಎಂ ಯೋಜನೆಯಡಿ ಕುಡಿಯುವ ನೀರು, ರಸ್ತೆ, ಹಾಗೂ ಈ ಹಿಂದೆ ನಡೆದಿರುವ ಕೇಂದ್ರ ಸರ್ಕಾರದ ಯೋಜನೆಗಳಿಗೂ ಅನುದಾನ ಬಿಡುಗಡೆ ಮಾಡಿಲ್ಲ. ಈ ಅನುದಾನಗಳನ್ನು ಸಮರ್ಪಕವಾಗಿ ನೀಡಿದ್ದರೆ ಈಗ ನೀಡುತ್ತಿರುವ ಐದು ಗ್ಯಾರೆಂಟಿ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿಗೂ ಸಹಕಾರವಾಗುತ್ತದೆ. ಆದರೆ, ನಮ್ಮ ತೆರಿಗೆ ಹಣದಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
ಇನ್ನು ಮಾ.6ರಂದು ರಾಜ್ಯದ ಬಜೆಟ್ ಮಂಡನೆ ಮಾಡುತ್ತಿದ್ದು ಈಗಾಗಲೇ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ.
ಶಿಂಷಾ ಎಡದಂಡೆ ವ್ಯಾಪ್ತಿಯ ಕೆರೆ ಮತ್ತು ನಾಲೆಗಳ ಆಧುನೀಕರಣ ಕಾಮಗಾರಿ ಕೈಗೊಳ್ಳಬೇಕಿದೆ. ಅಲ್ಲಿ ಯಾವುದೇ ರೀತಿಯ ಜಲ ಮೂಲಗಳಿಲ್ಲ ಹೀಗಾಗಿ ಏತ ನೀರಾವರಿ ಯೋಜನೆ ಮೂಲಕ ಕೆರೆಗಳ ಅಭಿವೃದ್ಧಿ ಮಾಡಬೇಕಿದೆ. ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆ ಕಾಮಗಾರಿ ಸೇರಿದಂತೆ ಒಟ್ಟಾರೆ 300 ರಿಂದ 400 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳ ನೀಡಬೇಕೆಂದು ಕೆಲ ಸಚಿವರು ಹಾಗೂ ಶಾಸಕರು ಅಪಸ್ವರ ಮಾಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅನುಕೂಲಸ್ಥ ಕುಟುಂಬಗಳು ಗ್ಯಾರಂಟಿ ಯೋಜನೆಗಳನ್ನು ಬಡವರು ಪಡೆಯಲಿ ಎಂಬ ಉದಾರ ಮನಸ್ಸಿನಿಂದ ಬಿಡಬೇಕು ಆಗ ಮಾತ್ರ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಅನುಕೂಲವಾಗಲಿದ್ದು, ಐದು ಗ್ಯಾರೆಂಟಿ ಯೋಜನೆಗಳನ್ನು ಐದು ವರ್ಷ ನಮ್ಮ ಸರ್ಕಾರ ನುಡಿದಂತೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಅಜ್ಜಹಳ್ಳಿ ರಾಮಕೃಷ್ಣ, ಮನು, ಶಂಕರೇಗೌಡ, ಈರೇಗೌಡ, ರವಿ, ಪ್ರಭಾಕರ್, ಮಹೇಶ್, ಸಿದ್ದರಾಮು, ವಿಜಯ್, ಎಇಇ ಪ್ರಶಾಂತ್, ಎಇ ಅವಿನಾಶ್ ಇತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
GOOD NEWS: ರಾಜ್ಯದಲ್ಲಿ ಹೊಸ ಲೇಔಟ್ ಗಳ ‘ಇ-ಖಾತಾ’ಗೆ ಗ್ರಾಮ ಪಂಚಾಯ್ತಿಯಲ್ಲೇ ಅರ್ಜಿ ಸಲ್ಲಿಕೆಗೆ ಅವಕಾಶ
BREAKING : ಇಸ್ರೇಲ್ ಮತ್ತು ಅಮೆರಿಕದ ದಾಳಿಯ ನಡುವೆ ಇರಾನ್ ನಲ್ಲಿ 4.3 ತೀವ್ರತೆಯ ಭೂಕಂಪ !








