ಸುದ್ದಿ ಮನೆಯಲ್ಲಿ ಮಹಿಳಾ ಸಾಧಕಿಯಾಗಿ ಹಲವು ಪ್ರಥಮಗಳಿಗೆ ಕಾರಣರಾದ ಎಂಬತ್ತೇಳು ವಸಂತ ಕಂಡಿರುವ ನಾಗಮಣಿ ಎಸ್ ರಾವ್ ಅವರನ್ನು ಕೆಯುಡಬ್ಲ್ಯೂಜೆ ಅಭಿಮಾನದಿಂದ ಗೌರವಿಸಿತು. ಅಮೃತ ಸ್ವಾತಂತ್ರ್ಯದ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಮ್ಮಿಕೊಂಡಿರುವ ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ಮಾಡುವ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಲ್ಲಿ ಸುದ್ದಿ ಮನೆಯ ಹಿರಿಯಕ್ಕ ನಾಗಮಣಿ ಅವರಿಗೆ ಬನಶಂಕರಿಯ ಅವರ ಮನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಶಾಲು ಹೊದಿಸಿ, ಹಾರ ಹಾಕಿ, ಫಲತಾಂಬೂಲ ನೀಡಿ ಸನ್ಮಾನಿಸಿದರು.
ತಾಯ್ನಾಡು, ಜನಮಿತ್ರ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ನಾಗಮಣಿ ಅವರು ಹಿಂತಿರುಗಿ ನೋಡಿದ್ದೆ ಇಲ್ಲ. ಆ ಕಾಲಘಟ್ಟದಲ್ಲಿ ಒಬ್ಬ ಮಹಿಳೆಯಾಗಿ ಪತ್ರಕರ್ತರಾಗಿ ಗಮನ ಸೆಳೆದ ಅವರು, ವಿಧಾನ ಮಂಡಳ ಅಧಿವೇಶನ ವರದಿ ಮಾಡಲು ವಿಧಾನಸಭೆಗೆ ಬಂದ ಮೊದಲ ಮಹಿಳಾ ಪತ್ರಕರ್ತೆಯೂ ಹೌದು. ಸಾಹಿತಿಯಾಗಿ, ಪತ್ರಕರ್ತೆಯಾಗಿ, ಆಕಾಶವಾಣಿ ಯಲ್ಲಿ ಸುದ್ದಿ ವಾಚಕಿಯಾಗಿ, ಅಂಕಣಕಾರ್ತಿಯಾಗಿ ಗಮನಸೆಳೆದ ಅವರು, ಅರವತ್ತರ ದಶಕದಿಂದಲೂ ನಿಖರವಾಗಿ ಚುನಾವಣೆ ವಾರ್ತೆ ಓದುವುದರಲ್ಲಿ ಹೆಸರುವಾಸಿ. ಆಕಾಶವಾಣಿ ಪ್ರದೇಶ ಸಮಾಚಾರ ಎಂದು ವಾರ್ತೆ ಓದಲು ಪ್ರಾರಂಭಿಸಿದ ನಾಗಮಣಿ ಎಸ್ ರಾವ್ ಅವರ ಧ್ವನಿ ಈಗಲೂ ಕನ್ನಡಿಗರ ಮನಸ್ಸಿನಲ್ಲಿ ಆಪ್ತವಾಗಿದೆ.
ಹಲವು ಹಳೆಯ ನೆನಪು ಮೆಲುಕು ಹಾಕುತ್ತಲೇ ಮಾತು ಪ್ರಾರಂಭಿಸಿದ ಅವರು, ಪತ್ರಕರ್ತರ ಮಾತೃ ಸಂಸ್ಥೆಯಾದ ಕೆಯುಡಬ್ಲ್ಯೂಜೆ
ಮನೆಗೆ ಬಂದು ಗೌರವ ಸಮರ್ಪಣೆ ಮಾಡಿದ್ದನ್ನು ಅಭಿಮಾನದಿಂದ ನೆನೆದು ಕೃತಜ್ಞತೆ ಸಲ್ಲಿಸಿದರು. ನಾನು ಆ ಕಾಲದಲ್ಲಿ ಕೆಯುಡಬ್ಲ್ಯೂಜೆ, ಸಕ್ರೀಯ ಸದಸ್ಯೆ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದನ್ನು ನೆನೆದರು.
ಕೆಯುಡಬ್ಲ್ಯೂಜೆಗೆ ಇಂದಿರಾಗಾಂಧಿ:
1965 ರಲ್ಲಿ ಕೇಂದ್ರ ಸರ್ಕಾರದಲ್ಲಿ ವಾರ್ತಾ ಸಚಿವರಾಗಿದ್ದ ಇಂದಿರಾ ಗಾಂಧಿ ಬೆಂಗಳೂರಿಗೆ ಬಂದಿದ್ದಾಗ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ವರದಿ ಮಾಡಲು ಹೋಗಿದ್ದಾಗ ಅಲ್ಲಿ ನಾನೊಬ್ಬಳೇ ಮಹಿಳೆ ಇದ್ದದ್ದು. ಸ್ವಾಗತ ಮಾಡುವಾಗ ಇಂದಿರಾ ಗಾಂಧಿಗೆ ಹಾರ ಹಾಕುವ ಅವಕಾಶ ನನಗೆ ದೊರೆಯಿತು. ಆ ಪೋಟೋವನ್ನು ಈಗಲೂ ಮನೆಯಲ್ಲಿ ಇಟ್ಟಕೊಂಡಿದ್ದೇನೆ. ಆ ಕ್ಷಣ ಮರೆಯಲಾಗದ ಘಟನೆ ಎಂದರು.
ಆಕಾಶವಾಣಿಯಲ್ಲಿ ಎದುರಿಸಿದ ಸವಾಲುಗಳನ್ನು ಸಾಧನೆ ಮೆಟ್ಟಿಲು ಮಾಡಿಕೊಂಡು ವೃತ್ತಿ ನಡೆಸಿದ ಘಟನಾವಳಿಗಳನ್ನು ಪ್ರಸ್ತಾಪಿಸಿ, ಕಲಿಯುವ ತುಡಿತದ ಜೊತೆಗೆ ಆತ್ಮವಿಶ್ವಾಸ, ಧೈರ್ಯ ಇದ್ದರೆ ಸಾಕು ಎಲ್ಲವನ್ನೂ ಗೆಲ್ಲಬಹುದು. ಎಂದಿಗೂ ನಮ್ಮೊಳಗಿನ ವಿಶ್ವಾಸ ಕಳೆದುಕೊಳ್ಳಬಾರದು ಎಂದರು. ಈಗಿನ ಮಾಧ್ಯಮ ಕ್ಷೇತ್ರ ವ್ಯಾಪಕವಾಗಿ ಬೆಳೆದಿದೆ. ಆದರೆ ಸುದ್ದಿ ವಿಶ್ವಾಸಾರ್ಹತೆ ಕಡಿಮೆ ಆಗುತ್ತಿರುವುದು ಆತಂಕದ ಸಂಗತಿ. ನಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದರು.
ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಮಹಿಳಾ ಪತ್ರಕರ್ತೆಯಾಗಿ ಹಲವು ಆದರ್ಶಗಳನ್ನು ನಾಗಮಣಿ ಅವರು ನೀಡಿದ್ದಾರೆ. ಸುದ್ದಿ ಮನೆಯ ಹಿರಿಯರ ನಡೆ ಕಿರಿಯರಿಗೆ ಬೆಳಕಾಗಬೇಕು ಎಂದರು. ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜು ಮಾತನಾಡಿ, ಹಿರಿಯರ ಮನೆಗೆ ಹೋಗಿ ಗೌರವಿಸುವ ಮೂಲಕ ಕೆಯುಡಬ್ಲ್ಯೂಜೆ ಸಾರ್ಥಕ ಕೆಲಸ ಮಾಡುತ್ತಿದೆ. ನಾಗಮಣಿ ಅವರನ್ನು ಗೌರವಿಸಿದ್ದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿ ಎಂದರು.
ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಹಿರಿಯ ಪತ್ರಕರ್ತೆ ಮಾಲತಿ ಭಟ್, ಕಿರಣ್ ಮಯಿ ಮಾತನಾಡಿದರು. ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರಿಕಟ್, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸೋಮಶೇಖರ್ ಗಾಂಧಿ, ದೇವರಾಜು, ವಾಸುದೇವ ಹೊಳ್ಳ ಹಾಜರಿದ್ದರು.