ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಉತ್ಸವಕ್ಕೆ ಈ ಬಾರಿ ಧರ್ಮ ದಂಗಲ್ನ ಕರಿನೆರಳು ಬಿದ್ದಿದೆ. ಹಲವಾರು ವರ್ಷಗಳಿಂದ ಜಾತ್ರೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಮರಿಗೆ ಈ ಬಾರಿ ಹಿಂದೂ ಸಂಘಟನೆಗಳು ಬಹಿಷ್ಕಾರ ಹಾಕಿದ್ದು, ಹೀಗಾಗಿ ಮುಸ್ಲಿಮರು ಜಾತ್ರೆಯ ವ್ಯಾಪಾರಕ್ಕೆ ಬಾರದೆ ಧರ್ಮ ದಂಗಲ್ನ ಆತಂಕದಲ್ಲಿದ್ದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಘರ್ಷವಿಲ್ಲದೇ ಜಾತ್ರೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿಗೆ ಧರ್ಮದಂಗಲ್ನ ಕರಿನೆರಳು ಬೀರಿದೆ. ಈ ಬಾರಿ ಚಂಪಾಷಷ್ಠಿಗೆ ಮುಸ್ಲಿಂ ವ್ಯಾಪಾರಿಗಳು ಬರಬಾರದು ಅಂತಾ ಹಿಂದೂ ಸಂಘಟನೆಗಳು ತಾಕೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಚಂಪಾಷಷ್ಠಿ ಮುಸ್ಲಿಂ ವ್ಯಾಪಾರಿಗಳಿಲ್ಲದೇ ನಡೆದಿದೆ. ಮುಸ್ಲಿಂ ವ್ಯಾಪಾರಿಗಳೂ ಹಿಂದೂ ಸಂಘಟನೆಗಳ ತಾಕೀತಿಗೆ ಮಣಿದು ವ್ಯಾಪಾರಕ್ಕೆ ಬಾರದೇ ಜಾತ್ರೋತ್ಸವದಿಂದ ದೂರವುಳಿದಿದ್ದಾರೆ. ಹೀಗಾಗಿ ಚಂಪಾಷಷ್ಠಿ ಧರ್ಮ ದಂಗಲ್ನ ಆತಂಕವಿಲ್ಲದೇ ನಿರಾಳವಾಗಿ ನಡೆದಿದೆ.
ಕಳೆದ ವರ್ಷ ಕರಾವಳಿಯಲ್ಲಿ ಆರಂಭವಾಗಿದ್ದ ಧರ್ಮದಂಗಲ್ ಈ ಬಾರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಟ್ಟಿದೆ. ಈ ಹಿನ್ನಲೆಯಲ್ಲಿ ಚಂಪಾಷಷ್ಠಿಯ ಜಾತ್ರಾ ಸಂಧರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡಬಾರದು ಅಂತಾ ಹಿಂದೂ ಸಂಘಟನೆಗಳು ಬ್ಯಾನರ್ ಅಳವಡಿಸಿದೆ. ಜೊತೆಗೆ ಪೊಲೀಸ್ ಠಾಣೆಗೂ ದೂರು ನೀಡಿತ್ತು. ದೆಹಲಿಯ ಶ್ರದ್ಧಾ ಹತ್ಯೆ, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ (Mangaluru Blast) ಸೇರಿದಂತೆ ಹಲವು ಪ್ರಕರಣದಲ್ಲಿ ಮುಸ್ಲಿಮರೇ ತೊಡಗಿಕೊಂಡು ರಾಷ್ಟ್ರದಲ್ಲಿ ಅಭದ್ರತೆ ಕಾರಣರಾಗಿದ್ದಾರೆ. ಹೀಗಾಗಿ ಅವರು ಕುಕ್ಕೆಯಲ್ಲಿ ವ್ಯಾಪಾರ ಮಾಡುವ ಅವಶ್ಯಕತೆ ಇಲ್ಲ ಅಂತಾ ಹಿಂದೂ ಸಂಘಟನೆಗಳು ಖಡಕ್ ಎಚ್ಚರಿಕೆ ನೀಡಿದೆ.
ಚಂಪಾಷಷ್ಠಿಯ ಉತ್ಸವಕ್ಕೆ ಲಕ್ಷಾಂತರ ಭಕ್ತರು ಕುಕ್ಕೆಗೆ ಆಗಮಿಸಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಅಂತಾ ಕುಕ್ಕೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಜರಾಯಿ ಇಲಾಖೆಯ ಆದೇಶದನ್ವಯ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಅಂತಾ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಿಂದೂ ಜಾಗರಣ ವೇದಿಕೆ ಮನವಿಯನ್ನೂ ಮಾಡಿತ್ತು. ಜೊತೆಗೆ ಮುಸ್ಲಿಂ ವ್ಯಾಪಾರಿಗಳು ಕ್ಷೇತ್ರದ ಆವರಣಕ್ಕೆ ಬಾರದಂತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಿಗಾ ವಹಿಸಿದ್ದರು.
ಈ ಬಾರಿ ಮಾತ್ರ ಅಲ್ಲ ಇನ್ನು ಮುಂದೆ ಯಾವುದೇ ಸಂದರ್ಭದಲ್ಲೂ ಮುಸ್ಲಿಂಮರನ್ನು ನಮ್ಮ ಶ್ರದ್ಧಾ ಕೇಂದ್ರವಾದ ಕುಕ್ಕೆಗೆ ಬರಲು ಬಿಡೋದಿಲ್ಲ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ನ ಕಾವು ಹೆಚ್ಚಾಗಿದೆ. ವ್ಯಾಪಾರ ನಿರ್ಬಂಧದ ಬಿಸಿ ಬೇರೆ ಬೇರೆ ಜಾತ್ರೋತ್ಸವಗಳಿಗೆ ಹಬ್ಬುತ್ತಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡೋದೇ ಪೊಲೀಸರಿಗೆ ಸವಾಲಾಗಿದೆ.