ಶಿವಮೊಗ್ಗ: ಇಂದಿನ ದಿನಗಳಲ್ಲಿ ‘ಸಾಮಾಜಿಕ ನಾಟಕ’ ಎಂದರೆ ಸಾಹಿತ್ಯವಿಲ್ಲದ ಹಾಡುಗಳು, ದ್ವಂದ್ವಾರ್ಥದ ಸಂಭಾಷಣೆಗಳು (Double Meaning) ಇರಲೇಬೇಕು ಎಂಬ ಅಲಿಖಿತ ನಿಯಮವೊಂದು ಚಾಲ್ತಿಯಲ್ಲಿದೆ. ಇಂತಹ ಕಾಲಘಟ್ಟದಲ್ಲಿ, ನೈಜ ಸಾಹಿತ್ಯ ಮತ್ತು ಕಲಾತ್ಮಕ ಅಭಿನಯದ ಮೂಲಕ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡಿ, ಕೆಚ್ಚೆದೆಯ ಸಾಹಸಕ್ಕೆ ಸಾಕ್ಷಿಯಾದವರು ಸಾಗರದ ಕುಗ್ವೆ ಗ್ರಾಮದ ರಾಮೇಶ್ವರ ನಾಟಕ ಶಾಲೆಯ ಕಲಾವಿದರು.
ಕಳೆದ ಮಾರ್ಚ್ 13 ರಂದು ಸೊರಬ ತಾಲೂಕಿನ ಉಳವಿಯ ಪತ್ರೆಸಾಲಿನಲ್ಲಿ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಈ ಕಲಾವಿದರು ಪ್ರದರ್ಶಿಸಿದ ‘ಮನೆಗೆ ತಕ್ಕ ಮಗ’ ಅರ್ಥಾತ್ ‘ಸಹೋದರರ ಸವಾಲ್’ ಸಾಮಾಜಿಕ ನಾಟಕವು ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಮನೋಜ್ಞವಾಗಿ ಮೂಡಿಬಂದಿತು.
ಮನಕಲಕುವ ಕಥಾಹಂದರ
ರೈತ ಶಿವಪ್ಪ ಹಾಗೂ ಆತನ ಮಕ್ಕಳಾದ ರಾಮು, ಗಂಗಾಧರ ಮತ್ತು ಪುತ್ರಿ ಗೌರಿಯ ಸುತ್ತ ಸುತ್ತುವ ಈ ಕಥೆ, ಬಡತನ ಮತ್ತು ಶ್ರೀಮಂತಿಕೆಯ ನಡುವಿನ ಸಂಘರ್ಷವನ್ನು ಬಿಂಬಿಸುತ್ತದೆ. ಅಧಿಕಾರಿಯಾಗಬೇಕೆಂಬ ಹಂಬಲ ಹೊತ್ತ ಮಗ ಗಂಗಾಧರ, ಹಳ್ಳಿಯ ಮುಗ್ಧ ರೈತ ಶಿವಪ್ಪನ ಕನಸುಗಳಿಗೆ ದರ್ಪದ ಶ್ರೀಮಂತ ರಾವಣಗೌಡ ಮುಳ್ಳಾಗುತ್ತಾನೆ.
ಬಡವರ ಮೇಲೆ ದೌರ್ಜನ್ಯ ಎಸಗುವ, ಹೆಣ್ಣು ಮಕ್ಕಳ ಶೀಲಕ್ಕೆ ಕೈಹಾಕುವ ರಾವಣಗೌಡನ ಅಟ್ಟಹಾಸ, ಆತ ಮಾಡಿದ ಅತ್ಯಾಚಾರ ಮತ್ತು ಕೊಲೆಗಳ ಸರಣಿ, ಹಾಗೂ ಸಮಾಜದ ತಪ್ಪು ತೀರ್ಪುಗಳಿಂದ ನೊಂದ ರಾಮು ಹೇಗೆ ಪ್ರತಿರೋಧ ತೋರುತ್ತಾನೆ ಎನ್ನುವುದೇ ನಾಟಕದ ಹೂರಣ. ಕಾಡಿನ ಸೈನ್ಯ ಕಟ್ಟಿ ಶ್ರೀಮಂತರ ದರ್ಪ ಅಡಗಿಸುವ ರುಂಡಾಚಾರಿ ಮತ್ತು ಇನ್ಸ್‌ಪೆಕ್ಟರ್ ಆಗಿ ಅಣ್ಣನನ್ನೇ ಬಂಧಿಸಲು ಬರುವ ಗಂಗಾಧರನ ಪಾತ್ರಗಳು ನಾಟಕಕ್ಕೆ ವೇಗ ನೀಡಿದವು. ಅಂತಿಮವಾಗಿ ಸತ್ಯಕ್ಕೆ ಜಯ ಸಿಗುವ ಕ್ಷಣ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿತು.
ವಿಶೇಷತೆಗಳೇನು?
-
ಕ್ಲಾಸಿಕ್ ಹಾಡುಗಳ ಬಳಕೆ: ಇಂದಿನ ಅಬ್ಬರದ ಹಾಡುಗಳ ಬದಲಿಗೆ, ವರನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ಹಳೆಯ ಸುಮಧುರ ಗೀತೆಗಳನ್ನು ಬಳಸಿಕೊಂಡು ಅಭಿನಯಿಸಿದ್ದು ನಾಟಕದ ಮೆರುಗನ್ನು ಹೆಚ್ಚಿಸಿತು.
-
ಕಿಕ್ಕಿರಿದು ನಾಟಕ ವೀಕ್ಷಣೆ: ರಾತ್ರಿ ಮೂರು ಗಂಟೆಯಾದರೂ ಜನ ಸಾಗರ ಕಿಕ್ಕಿರಿದು ತುಂಬಿತ್ತು ಎನ್ನುವುದೇ ಕುಗ್ವೆ ಕಲಾವಿದರ ಯಶಸ್ಸಿಗೆ ಸಾಕ್ಷಿ.
-
ಸಂದೇಶದ ಸಾರ: ಬರೀ ಮನರಂಜನೆಗೆ ಸೀಮಿತವಾಗದೆ, ಅನ್ಯಾಯದ ವಿರುದ್ಧ ಹೋರಾಡುವ ಕೆಚ್ಚನ್ನು ಈ ನಾಟಕ ಪ್ರೇಕ್ಷಕರಲ್ಲಿ ಬಿತ್ತಿತು. ಆ ಮೂಲಕ ಸಂಪತ್ತಿಗೆ ಸವಾಲು ಹಾಕಿದ ಮನೆಗೆ ತಕ್ಕ ಮಗ ಆರ್ಥಾತ್ ಸಹೋದರರ ಸವಾಲ್ ಕುಗ್ವೆ ಕಲಾವಿದರ ಅಭಿನಯಕ್ಕೆ ಉಳವಿ ಹಾಗೂ ಸುತ್ತಮುತ್ತಲಿನ ಜನರು ಮನಸೋತು ಬಿಟ್ಟರು.
ಜಾತ್ರೆಯಲ್ಲಿ ಸಾಂಸ್ಕೃತಿಕ ಕಂಪು
ಉಳವಿ ಜಾತ್ರೆಯ ಪ್ರಯುಕ್ತ ಯಕ್ಷಗಾನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದರೂ, ಕುಗ್ವೆ ಯುವಕರ ಈ ನಾಟಕ ಮಾತ್ರ ಸುತ್ತಮುತ್ತಲ ಗ್ರಾಮಸ್ಥರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇಂದಿನ ಯುವಕರು ಇಂತಹ ಸದಭಿರುಚಿಯ ನಾಟಕಗಳನ್ನು ಆಯ್ದುಕೊಂಡು ಕಲೆ ಉಳಿಸಬೇಕು ಎಂಬುದಕ್ಕೆ ಈ ಪ್ರದರ್ಶನ ಒಂದು ಮಾದರಿ.
ಸುತ್ತಮುತ್ತಲಿನ ಭಾಗಗಳಲ್ಲಿ ನಡೆಯುವ ಸಾಮಾನ್ಯ ನಾಟಕಗಳಿಗೂ ಕುಗ್ವೆ ಗ್ರಾಮದವರು ಪ್ರದರ್ಶಿಸಿದ ಈ ನಾಟಕಕ್ಕೂ ಭೂಮಿ ಆಕಾಶದಷ್ಟು ವ್ಯತ್ಯಾಸವಿದೆ. ಶಿಸ್ತುಬದ್ಧ ಅಭಿನಯ ಮತ್ತು ಅದ್ಭುತ ಸಾಹಿತ್ಯದಿಂದ ಎಲ್ಲರಿಗೂ ಖುಷಿ ನೀಡಿದೆ ಎಂಬುದು ಉಳವಿಯ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಬಂದು, ನಾಟಕ ವೀಕ್ಷಿಸಿದಂತ ಸಾರ್ವಜನಿಕರ ಅಭಿಪ್ರಾಯವಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಮಂಡ್ಯದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ ಕೊರತೆ ಇಲ್ಲ: ಡಿಸಿ ಡಾ.ಕುಮಾರ್ ಮಾಹಿತಿ
ದತ್ತು ಪಡೆದ ತಾಯಂದಿರಿಗೂ 12 ವಾರಗಳ ‘ಹೆರಿಗೆ ರಜೆ’ ಕಡ್ಡಾಯ: ಸುಪ್ರೀಂ ಕೋರ್ಟ್
SHOCKING : ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್ : ಗೆಳೆಯನ ಮುಂದೆನೆ ಹೋಯ್ತು ಜೀವ | Watch Video








