ಬೆಂಗಳೂರು/ಕೊಚ್ಚಿನ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ಕೇವಲ ಪ್ರಯಾಣಿಕರ ಸೇವೆಯಲ್ಲಿ ಮಾತ್ರವಲ್ಲದೆ, ತನ್ನ ಸಿಬ್ಬಂದಿಗಳ ಕಾರ್ಯದಕ್ಷತೆ ಹೆಚ್ಚಿಸುವ ‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ (Training and Organisation Development) ವಿಭಾಗದಲ್ಲಿಯೂ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಪ್ರತಿಷ್ಠಿತ World HRD Congress ವತಿಯಿಂದ ನೀಡಲಾಗುವ ‘ಕೇರಳ ಲೀಡರ್ ಶಿಪ್ ಪ್ರಶಸ್ತಿ-2026’ ಅನ್ನು ಕೆಎಸ್ಆರ್ಟಿಸಿ ಮುಡಿಗೇರಿಸಿಕೊಂಡಿದೆ.
ಮಾರ್ಚ್ 31ರಂದು ಕೇರಳದ ಕೊಚ್ಚಿನ್ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು.
ಸಾಧನೆಯ ಹಿಂದಿನ ಶಕ್ತಿ: ವೈವಿಧ್ಯಮಯ ತರಬೇತಿ ಕಾರ್ಯಕ್ರಮಗಳು
ನಿಗಮದ ವ್ಯಾಪ್ತಿಯಲ್ಲಿರುವ 5 ಪ್ರಮುಖ ತರಬೇತಿ ಕೇಂದ್ರಗಳು ಕಳೆದ 6 ತಿಂಗಳ ಅವಧಿಯಲ್ಲಿ ಕೈಗೊಂಡ ಕ್ರಾಂತಿಕಾರಿ ಬದಲಾವಣೆಗಳು ಈ ಪ್ರಶಸ್ತಿಗೆ ಭಾಜನವಾಗಿವೆ. ಸುಮಾರು 12,000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಅತ್ಯಾಧುನಿಕ ಹಾಗೂ ಪರಿಣಾಮಕಾರಿ ತರಬೇತಿ ನೀಡುವ ಮೂಲಕ ನಿಗಮವು ಸಾರಿಗೆ ಕ್ಷೇತ್ರದಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದೆ.
ಪ್ರಮುಖ ತರಬೇತಿ ಅಂಶಗಳು:
-
ಸುರಕ್ಷತೆ ಮತ್ತು ದಕ್ಷತೆ: ಇಂಧನ ಕ್ಷಮತೆ, ಅಪಘಾತ ರಹಿತ ಚಾಲನಾ ತರಬೇತಿ, ರಸ್ತೆ ಸುರಕ್ಷತೆ ಮತ್ತು ಸಿಮ್ಯುಲೇಟರ್ ಆಧಾರಿತ ತರಬೇತಿಗಳಿಗೆ ವಿಶೇಷ ಒತ್ತು ನೀಡಲಾಗಿದೆ.
-
ಸಾಮಾಜಿಕ ಕಳಕಳಿ: ಪಿ.ಎಂ.ಅಜಯ್ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಹಾಗೂ ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿಯೊಂದಿಗೆ ಉಚಿತ ಪರವಾನಗಿ (DL) ವಿತರಿಸುವ ಮೂಲಕ ಸಾಮಾಜಿಕ ಸಬಲೀಕರಣಕ್ಕೆ ಶ್ರಮಿಸಿದೆ.
-
ವೃತ್ತಿಪರತೆ: ಹೊಸದಾಗಿ ಆಯ್ಕೆಯಾದ ಚಾಲಕ-ಕಂ-ನಿರ್ವಾಹಕರು, ಕರಾಸಾ ಪೇದೆಗಳು ಮತ್ತು ಕಿರಿಯ ಸಹಾಯಕರಿಗೆ ವೃತ್ತಿ ಪರಿಚಯ ಹಾಗೂ ಜವಾಬ್ದಾರಿಗಳ ಕುರಿತು ತರಬೇತಿ ನೀಡಲಾಗಿದೆ.
-
ನಿರಂತರ ಕಲಿಕೆ: ಮೇಲ್ವಿಚಾರಕರು ಹಾಗೂ ಆಡಳಿತ ಸಿಬ್ಬಂದಿಗಳಿಗೆ ಪುನಃಶ್ಚೇತನ ತರಬೇತಿ ನೀಡುವ ಮೂಲಕ ನಿಗಮದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗಿದೆ.
ಪ್ರಶಸ್ತಿ ಪ್ರದಾನ ಮತ್ತು ಗೌರವ
ಕೊಚ್ಚಿನ್ನಲ್ಲಿ ನಡೆದ ಸಮಾರಂಭದಲ್ಲಿ College of Ship Technology ನಿರ್ದೇಶಕರಾದ ಕ್ಯಾಪ್ಟನ್ ಎಸ್.ಟಿ. ಶ್ರೀಧರ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕೆಎಸ್ಆರ್ಟಿಸಿ ಪರವಾಗಿ ಮಂಡಳಿಯ ಕಾರ್ಯದರ್ಶಿ ಹಾಗೂ ಕೆ ಎಸ್ ಆರ್ ಟಿ ಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್ ಹಾಗೂ ಹಾಸನದ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲೆ ಎ.ಎನ್ ಗೀತಾಂಜಲಿ ಪ್ರಶಸ್ತಿಯನ್ನು ಸ್ವೀಕರಿಸಿದರು:
ನಿಗಮದ ಅಭಿವೃದ್ಧಿಗೆ ಹೊಸ ವೇಗ
ಕೇವಲ 6 ತಿಂಗಳ ಅವಧಿಯಲ್ಲಿ ನಿಗಮದ ತರಬೇತಿ ಸೂಚ್ಯಂಕವು (Training Index) ಗಮನಾರ್ಹವಾಗಿ ಏರಿಕೆಯಾಗಿರುವುದು ಈ ಪ್ರಶಸ್ತಿಯ ಮೂಲಕ ಸಾಬೀತಾಗಿದೆ. ಸಿಬ್ಬಂದಿಗಳ ಕೌಶಲ್ಯ ಅಭಿವೃದ್ಧಿಯು ಅಂತಿಮವಾಗಿ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಗುಮ ಪ್ರಯಾಣದ ಅನುಭವವನ್ನು ನೀಡಲು ಸಹಕಾರಿಯಾಗಲಿದೆ ಎಂಬುದು ನಿಗಮದ ಆಶಯವಾಗಿದೆ.
ರಾಜ್ಯದಲ್ಲಿ ಅನಿರೀಕ್ಷಿತ ಆಲಿಕಲ್ಲು ಮಳೆ: ಸಮೀಕ್ಷೆ ಪೂರ್ಣಗೊಳಿಸಿ ಬೆಳೆಹಾನಿಗೆ ಪರಿಹಾರ – ಸಚಿವ ಸಂತೋಷ್ ಲಾಡ್








