ಬೆಂಗಳೂರು: ಮಂಗಳೂರಲ್ಲಿ ಕೆ ಎಸ್ ಆರ್ ಟಿಸಿ ಕಂಡಕ್ಟರ್ ಒಬ್ಬ ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಂತ ಘಟನೆ ನಡೆದಿತ್ತು. ಈಗಾಗಲೇ ಆತನನ್ನು ಅಮಾನತುಗೊಳಿಸಲಾಗಿದೆ. ಇದಲ್ಲದೇ ತನಿಖೆ ನಡೆಸಿ, ತಪ್ಪಿತಸ್ಥ ಕೆ ಎಸ್ ಆರ್ ಟಿಸಿ ನಿರ್ವಾಹಕನನ್ನು ಸೇವೆಯಿಂದ ವಜಾಗೊಳಿಸುವಂತೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಈ ಸಂಬಂಧ ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವಂತ ಅವರು, ಇಂದು ಮಂಗಳೂರು ವಿಭಾಗದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ನಿರ್ವಾಹಕನೊಬ್ಬ ಮಹಿಳಾ ಪ್ರಯಾಣಿಕರೊಡನೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವಿಡಿಯೋಗೆ ಸಂಬಂಧಪಟ್ಟಂತೆ, ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿರ್ವಾಹಕನನ್ನು ಅಮಾನತು ಮಾಡಿರುವುದು ಸರಿಯಷ್ಟೇ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಹೆಣ್ಣು ಮಕ್ಕಳೊಡನೆ ಗೌರವದೊಂದಿಗೆ ನಡೆದುಕೊಳ್ಳುವುದು ನಮ್ಮ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಿರಬೇಕು. ಈ ರೀತಿಯ ಅಸಹ್ಯಕರ ನಡವಳಿಕೆ ಅಕ್ಷಮ್ಯ ಅಪರಾಧ ಎಂಬುದಾಗಿ ಹೇಳಿದ್ದಾರೆ.
ಕೆ ಎಸ್ ಆರ್ ಟಿ ಸಿ ಬಸ್ಸುಗಳು ಹಾಗೂ ಚಾಲಕ ನಿರ್ವಾಹಕರ ಬಗ್ಗೆ ಸಾರ್ವಜನಿಕ ಪಯಾಣಿಕರು ಅತೀವ ನಂಬಿಕೆ ಮತ್ತು ಪ್ರೀತಿ ಹೊಂದಿದ್ದಾರೆ. ಕೆಲವೊಬ್ಬರು ಮಾಡುವ ಈ ರೀತಿಯ ಕೆಲಸಗಳು ಸಂಸ್ಥೆ ಹಾಗೂ ಸಿಬ್ಬಂದಿಗಳ ಗೌರವಕ್ಕೆ ಧಕ್ಕೆ ತರುವಂತಹದು. ಈ ಘಟನೆಗೆ ಸಂಬಂಧಪಟ್ಟಂತೆ ಕೂಡಲೇ ವಿಚಾರಣಾ ಪಕ್ರಿಯೆ ಪ್ರಾರಂಭಿಸಿ, ತ್ವರಿತವಾಗಿ ವಿಚಾರಣೆ ಮುಗಿಸಿ, ಆ ನಿರ್ವಾಹಕನನ್ನು ಸೇವೆಯಿಂದಲೇ ವಜಾ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.
BREAKING: ಇನ್ಮುಂದೆ ಮಲೆ ಮಹದೇಶ್ವರ ಬೆಟ್ಟ ಮದ್ಯಪಾನ ಪಾನ ಮುಕ್ತ: ಸಿಎಂ ಸಿದ್ಧರಾಮಯ್ಯ ಘೋಷಣೆ