ಮಂಡ್ಯ :- ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಂಡ್ಯ ಜಿಲ್ಲೆಯ ಸಾರಿಗೆ ಬಸ್‌ಗಳ ಸಂಚಾರ ಬಹುತೇಕ ಸಂಪೂರ್ಣ ಸ್ತಬ್ಧ ಸ್ತಬ್ಧಗೊಂಡಿದೆ.
ಮಂಡ್ಯ ಜಿಲ್ಲೆಯ 7 ಘಟಕಗಳ ಚಾಲಕರು ಮತ್ತು ನಿರ್ವಾಹಕರು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಗೈರು ಹಾಜರಾಗಿರುವ ಪರಿಣಾಮ ಬೆಳಿಗ್ಗೆ 6 ಗಂಟೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ತೊಂದರೆಗೀಡಾದರು.
ಇದರಿಂದಾಗಿ ಸಾರ್ವಜನಿಕರ ಪ್ರಯಾಣಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ಸಾರಿಗೆ ಬಸ್‌ಗಳನ್ನೇ ಅವಲಂಬಿಸಿರುವ ಜನರು ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ, ಕಾಲೇಜುಗಳಿಗೆ ಹೋಗಲು ಪರದಾಡುವಂತಾಗಿದೆ.
ಅನಿರ್ದಿಷ್ಟಾವಧಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಾರಿಗೆ ಅಧಿಕಾರಿಗಳು ಮದ್ದೂರು ಘಟಕದ ವತಿಯಿಂದ 5 ಮಂದಿ ಖಾಸಗಿ ಚಾಲಕರನ್ನು ನೇಮಕ ಮಾಡಿಕೊಂಡು ಬಸ್ ಚಾಲನೆಗೆ ಮುಂದಾಗಿದ್ದರು. ಆದರೆ, ನಿರ್ವಾಹಕರು ಗೈರು ಹಾಜರಾಗಿರುವ ಕಾರಣ ಟಿಕೇಟ್ ವಿತರಣೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಖಾಸಗಿ ಚಾಲಕರು ಬಸ್ ಚಾಲನೆಗೆ ಮುಂದಾಗಲಿಲ್ಲ.
ಸಾರಿಗೆ ವಾಹನಗಳು ಬಂದ್ ಮಾಡಿರುವುದರಿಂದ ಖಾಸಗಿ ವಾಹನಗಳ ರಸ್ತೆಗಿಳಿದಿದ್ದು, ಪ್ರಯಾಣಿಕರು ಹೆಚ್ಚಿನ ಹಣ ನೀಡಿ ಪ್ರಯಾಣಿಸುವಂತ ಅನಿವಾರ್ಯತೆ ಎದುರಾಯಿತು. ಇನ್ನು ಮದ್ದೂರು ಬಸ್ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 1 ಕೆ.ಎಸ್.ಆರ್.ಪಿ ತುಕಡಿ, ಹೆಚ್ಚಿನ ಸಿಬ್ಬಂದಿಯೊಂದಿಗೆ ಮದ್ದೂರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ನೌಕರರ ಬೇಡಿಕೆಗಳು.
1. 38 ತಿಂಗಳ ಅರಿಯರ್ಸ್ ನೀಡಬೇಕು.
2. ಕಾರ್ಮಿಕರ ಒಪ್ಪಂದದ ಪ್ರಕಾರ ಚುನಾವಣೆ ನಡೆಯಬೇಕು.
3. ಕಳೆದ ಮುಷ್ಕರದಲ್ಲಿ ಆದಂತಹ ಶಿಕ್ಷಾದೇಶ ರದ್ದು ಪಡಿಸಬೇಕು.
4. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿದರು.