ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ(NHM) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಾವಿರಾರು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗಾಗಿ ರಾಜ್ಯ ಸರ್ಕಾರದಿಂದ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಆದರೇ ಇದೊಂದು ಮರಣ ಶಾಸನವಿದ್ದಂತೆ. ಇದನ್ನು ಜಾರಿಗೊಳಿಸಬಾರದು. ತಕ್ಷಣವೇ ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ( KSHCOEA) ಆಗ್ರಹಿಸಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಪತ್ರಕರ್ತೆ ಭಾವನಾ ಬೆಳಗೆರೆ ಅವರು ಎನ್ ಹೆಚ್ ಎಂ ಅಡಿಯಲ್ಲಿ ರಾಜ್ಯದಲ್ಲಿ ಸುಮಾರು 30,000ಕ್ಕೂ ಹೆಚ್ಚು ಮಂದಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕನಿಷ್ಠ ವೇತನವನ್ನು ಪಡೆಯುತ್ತಿದ್ದಾರೆ. ಆದರೇ ಅವರಿಗೆ ನೇಮಕಾತಿ ಮತ್ತು ವರ್ಗಾವಣೆಯನ್ನು ಒಳಗೊಂಡಂತೆ ಹೆಚ್ ಆರ್ ಪಾಲಿಸಿಯನ್ನು ಜಾರಿಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದಾಗಿ ಪ್ರಶ್ನಿಸಿದರು.
ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಡಿಮೆ ವೇತನಕ್ಕೆ ತಮ್ಮ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಕಾಯಂ ಸಿಬ್ಬಂದಿಯಂತೆ ಕಡ್ಡಾಯ ವರ್ಗಾವಣೆ ಮಾಡಿದರೇ ಕುಟುಂಬ ನಿರ್ವಹಣೆ ಕಷ್ಟವಾಗಲಿದೆ. ಒಂದೊಮ್ಮೆ ಆದೇಶ ಜಾರಿಗೊಳಿಸುವುದಾದರೇ, ಕಾಯಂ ಸಿಬ್ಬಂದಿಗೆ ನೀಡಿದಂತೆ ಗುತ್ತಿಗೆ ಸಿಬ್ಬಂದಿಗೂ ವೇತನ ಹೆಚ್ಚಳ ಮಾಡಬೇಕು. ಡಿಎ, ಹೆಚ್ ಆರ್ ಎ ಪಾವತಿಸಬೇಕು ಎಂಬುದಾಗಿ ಆಗ್ರಹಿಸಿದರು.
ಭಾರತೀಯ ಮಜ್ದೂರ್ ಸಂಘದ ಕರ್ನಾಟಕ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ, ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಕಡಿಮೆ ವೇತನದಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಂತವರಿಗೆ ಮರಣ ಶಾಸನ ಎನ್ನುವಂತೆ ಮಾಡಲು ಹೊರಟಿರುವಂತ ಹೆಚ್ ಆರ್ ಪಾಲಿಸಿಯನ್ನು ತಕ್ಷಣವೇ ವಾಪಾಸ್ ಪಡೆಯಬೇಕು. ವರ್ಗಾವಣೆಗೆ ಮನವಿ ಮಾಡಿದವರಿಗೆ ಮಾತ್ರವೇ ಅವಕಾಶ ಮಾಡಿಕೊಡಬೇಕು ಎಂಬುದಾಗಿ ಒತ್ತಾಯಿಸಿದರು.
KSHCOEA ಸಂಘದ ಶ್ರೀಕಾಂತ್ ಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವಂತ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರ ಹೆಚ್ ಆರ್ ನೀತಿಯನ್ನು ಸಂಘವು ತಿರಸ್ಕರಿಸಿದೆ. ಇದನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಒಂದು ವೇಳೆ ಜಾರಿಗೊಳಿಸಿದ್ದೇ ಆದಲ್ಲಿ ತೀವ್ರವಾಗಿ ಹೋರಾಟವನ್ನು ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹಿಂಪಡೆಯಲು ಸರ್ಕಾರಕ್ಕೆ ಎರಡು ವಾರ ಡೆಡ್ ಲೈನ್
ಎನ್ ಹೆಚ್ ಎಂ ಗುತ್ತಿಗೆ ನೌಕರರಿಗೆ ಜಾರಿಗೊಳಿಸಿರುವ ಹೆಚ್ ಆರ್ ಪಾಲಿಸಿಯನ್ನು ಎರಡು ವಾರಗಳಲ್ಲಿ ವಾಪಾಸ್ ಪಡೆಯಬೇಕು. ಒಂದು ವೇಳೆ ರಾಜ್ಯ ಸರ್ಕಾರವು ಎನ್ ಹೆಚ್ ಎಂ ಗುತ್ತಿಗೆ ನೌಕರರಿಗೆ ಜಾರಿಗೊಳಿಸಿರುವಂತ ಹೆಚ್ ಆರ್ ಪಾಲಿಸಿಯನ್ನು ಹಿಂಪಡೆಯದೇ ಹೋದರೇ ಉಗ್ರವಾಗಿ ಹೋರಾಟ ಮಾಡುವಂತ ನಿರ್ಣಯವನ್ನು KSHCOEA-BMS ಸಂಘವು ಕೈಗೊಂಡಿದೆ.
ಎನ್ ಹೆಚ್ ಎಂ ಗುತ್ತಿಗೆ ನೌಕರರ ಹೆಚ್ ಆರ್ ನೀತಿಗೆ ವಿರೋಧ ಏಕೆ?
ಸರ್ಕಾರಿ ನೌಕರರಂತೆ ಎನ್ ಹೆಚ್ ಎಂ ನೌಕರರನ್ನು ಕಡ್ಡಾಯ ವರ್ಗಾವಣೆ ಮಾಡುವುದು ಪಾಲಿಸಿಯಲ್ಲಿ ಹೇಳಲಾಗಿದೆ. ಆದರೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಡಿಮೆ ವೇತನಕ್ಕೆ ತಮ್ಮ ಊರಿನ ಹತ್ತಿರವೋ, ಇತರೆಡೆಯೋ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕಡಿಮೆ ವೇತನದಲ್ಲೂ ತಮ್ಮ ವೇತನಕ್ಕೆ ಅನುಸಾರವಾಗಿ ಕುಟುಂಬ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಆದರೇ ಸರ್ಕಾರಿ ನೌಕರರಂತೆ ವರ್ಗಾವಣೆ ಮಾಡಿದರೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕುಟುಂಬದೊಂದಿಗೆ ತೆರಳಿ ಕಡಿಮೆ ವೇತನದಲ್ಲಿ ಕಾರ್ಯ ನಿರ್ವಹಿಸಲು ಕಷ್ಟವಾಗಲಿದೆ. ಈ ಹಿನ್ನಲೆಯಲ್ಲಿ ಕಡ್ಡಾಯ ವರ್ಗಾವಣೆಗೆ ವಿರೋಧ ವ್ಯಕ್ತವಾಗಿದೆ.
ಒಂದು ವೇಳೆ ಸರ್ಕಾರಿ ನೌಕರರಂತೆ ವರ್ಗಾವಣೆ ಮಾಡುವುದಾದರೇ ಅವರಂತೆಯೇ ಎಲ್ಲಾ ಸೌಲಭ್ಯಗಳನ್ನು ನೀಡಿ, ಟಿಎ, ಡಿಎ, ಹೆಚ್ ಆರ್ ಎ ನೀಡಿ ನಮ್ಮನ್ನು ವರ್ಗಾವಣೆ ಮಾಡಿ ಎಂಬುದು ನೌಕರರ ಆಗ್ರಹವಾಗಿದೆ. ಆದರೇ ಸರ್ಕಾರ ಜಾರಿಗೊಳಿಸಲು ಹೊರಟಿರುವಂತ ಹೆಚ್ ಆರ್ ಪಾಲಿಸಿಯಲ್ಲಿ ಅದ್ಯಾವುದರ ಬಗ್ಗೆ ಮಾಹಿತಿ ನೀಡದೇ ಗೊಂದಲವನ್ನು ಸೃಷ್ಠಿಸಿದೆ.
ಕಡ್ಡಾಯ ವರ್ಗಾವಣೆ ಬೇಡ. ಪರಸ್ಪರ ವರ್ಗಾವಣೆ, ಮನವಿ ಆಧಾರದಲ್ಲಿ ವರ್ಗಾವಣೆ ನೀಡಲು ಅವಕಾಶ ಮಾಡಿಕೊಡಲು ಒತ್ತಾಯಿಸಲಾಗಿದೆ. ಕಾರಣ ಸರ್ಕಾರಿ ನೌಕರರಂತೆ ವೇತನ ಎನ್ ಹೆಚ್ ಎಂ ಸಿಬ್ಬಂದಿಗಳಿಗೆ ಇಲ್ಲವಾಗಿದೆ ಎಂಬುದಾಗಿ ನೌಕರರ ಸಂಘವು ವಿರೋಧ ವ್ಯಕ್ತಪಡಿಸಿದೆ.
ಎಲ್ಲರನ್ನೂ ಒಮ್ಮೆ ಕರ್ತವ್ಯದಿಂದ ಬಿಡುಗಡೆ ಮಾಡಿ, ಮರು ನೇಮಕಾತಿ ಮಾಡಲಾಗುತ್ತದೆ. ಆ ಮರು ನೇಮಕಾತಿಯಲ್ಲಿ ಕೃಪಾಂಕ, ಸೇವಾ ಹಿರಿತನ ನೀಡಲಾಗುವುದು ಎಂಬುದಾಗಿ ಹೆಚ್ ಆರ್ ಪಾಲಿಸಿಯಲ್ಲಿ ತಿಳಿಸಲಾಗಿದೆ. ಆದರೇ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವಂತವರು ಮರು ನೇಮಕಾತಿಯ ವೇಳೆಯಲ್ಲಿ ಕೃಪಾಂಕ, ಸೇವಾ ಹಿರಿತನ ನೀಡಿದರೂ ಈಗಿನ ವಿದ್ಯಾರ್ಥಿಗಳ ಅಂಕದ ಮುಂದೆ ಕಡಿಮೆಯೇ ಆಗಲಿದೆ. ಆಗ ಹಾಲಿ ನೌಕರರಲ್ಲಿ ಕೆಲವರು ಕೆಲಸ ಕಳೆದುಕೊಳ್ಳುವ ಸಂಭವವಿದೆ ಎಂಬುದಾಗಿ ವಿರೋಧ ವ್ಯಕ್ತ ಪಡಿಸಿದ್ದಾರೆ.
ಈ ಸುದ್ದಿಗೋಷ್ಠಿಯ ವೇಳೆ ಎನ್ ಹೆಚ್ ಎಂ ಒಳ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಶ್ವತ್ ಸೇರಿದಂತೆ ಸಂಘದ ಪ್ರಮುಖರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING ; ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್’ಗಳಿಗೆ ‘ಮೂಲ ದೇಶ’ ಫಿಲ್ಟರ್ ಕಡ್ಡಾಯಕ್ಕೆ ಕೇಂದ್ರ ಸರ್ಕಾರ ಪ್ರಸ್ತಾಪ








