ಬೆಂಗಳೂರು: ಕನ್ನಡ ಮಾಧ್ಯಮದ ಪ್ರಶ್ನೆ ಪತ್ರಿಕೆಗಳಲ್ಲಿನ ಎಡವಟ್ಟುಗಳನ್ನು ಮುಂದುವರೆಸಿರುವ ಕರ್ನಾಟಕ ಲೋಕಸೇವಾ ಆಯೋಗದ ನಡೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತಂತೆ ಲೋಕಸೇವಾ ಆಯೋಗಕ್ಕೆ ಪತ್ರ ಬರೆದಿರುವ ಡಾ.ಬಿಳಿಮಲೆ, ಆಯೋಗವು ಮತ್ತೊಮ್ಮೆ ಬೇಡದ ಕಾರಣಗಳಿಗೆ ಸುದ್ದಿಯಲ್ಲಿರುವುದು ವಿಷಾದನೀಯವಾದ ಸಂಗತಿಯಾಗಿದೆ. ಪ್ರತಿಬಾರಿ ಆಯೋಗವು ನಡೆಸುವ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಅವಗಣಿಸುತ್ತಿರುವುದು ಆಯೋಗವು ಕನ್ನಡ ವಿರೋಧಿ ಧೋರಣೆಯನ್ನು ತಳೆದಿದೆಯೇ ಎನ್ನುವ ಗೊಂದಲವನ್ನು ಇದು ಉಂಟುಮಾಡುತ್ತಿದೆ ಎಂದಿದ್ದಾರೆ.
ಪ್ರಶ್ನೆ ಪತ್ರಿಕೆಯ ಪ್ರಶ್ನೆಯೊಂದನ್ನು ಸಹ ಉಲ್ಲೇಖಿಸಿರುವ ಡಾ.ಬಿಳಿಮಲೆ, “ಭಾರತದಲ್ಲಿನ ಪುನರಂ ಅವರ ಲೋಕನ ವಿಮರ್ಶಿ ಅಧಿಕಾರವು ಉಚ್ಚ ನ್ಯಾಯಾಲಯ ದೋಂದಿಗೆ ಸರ್ವೋಚ್ಚ ನ್ಯಾಯಾಲಯವು ಹೊಂದಿದೆ” ಎನ್ನುವ ಅರ್ಥವಿಲ್ಲದ ವಾಕ್ಯವೂ ಸಹ ಪ್ರಶ್ನೆಯಾಗಿರುವುದು ಆಯೋಗದ ಗಂಭೀರಲೋಪದ ವಿಷಯವಾಗಿರುತ್ತದೆ. ಕಳೆದ ಬಾರಿ ಪ್ರಾಧಿಕಾರದ ಸೂಚನೆಯ ಮೇರೆಗೆ ಆಯೋಗದಲ್ಲಿ ಭಾಷಾಂತರ ವಿಭಾಗವನ್ನು ಆರಂಭಿಸುವುದಾಗಿ ಭರವಸೆಯನ್ನು ನೀಡಿದರೂ ಸಹ ಇಲ್ಲಿಯವರೆಗೂ ಕ್ರಮಕ್ಕೆ ಮುಂದಾಗದಿರುವುದು ಆಯೋಗದ ಅಸಹಾಯಕತೆಯನ್ನು ಅಭಿವ್ಯಕ್ತಿಸುತ್ತದೆ ಎಂದಿದ್ದಾರೆ.
ಪದೇ ಪದೇ ಈ ರೀತಿಯ ಪ್ರಮಾದಗಳು ಉಂಟಾಗಲು ಕಾರಣವಾದರೂ ಏನು? ಈ ರೀತಿಯ ಪ್ರಮಾದಗಳನ್ನು ಸರಿಪಡಿಸಲು ಆಯೋಗಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಕನ್ನಡದ ಅವಗಣನೆಯ ಮೂಲ ಎಲ್ಲಿದೆ ಎಂದು ಆಯೋಗಕ್ಕೆ ಪ್ರಶ್ನಿಸಿರುವ ಡಾ.ಬಿಳಿಮಲೆ ಆಯೋಗವು ತಮ್ಮ ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಉತ್ತರವನ್ನು ಸಲ್ಲಿಸುವ ಬಾಧ್ಯತೆಯನ್ನು ಹೊಂದಿದೆ. ಈ ಲೋಪಕ್ಕೆ ಕಾರಣವಾಗಿರಬಹುದಾದ ಅಧಿಕಾರಿಗಳ ವಿರುದ್ಧ ಶಿಸ್ತಿನಕ್ರಮ ಕೈಗೊಂಡು ಕನ್ನಡಿಗ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸದೇ ಹೋದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಲೋಪವನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಸೂಚಿಸಿದ್ದಾರೆ.
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ಈ ಏರಿಯಾಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut