ಬೆಂಗಳೂರು: ರಾಜ್ಯ ವಿಧಾನಪರಿಷತ್ತಿನಲ್ಲಿ ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡವಳಿಕೆ ಅತ್ಯಂತ ಆಕ್ಷೇಪಾರ್ಹವಾಗಿತ್ತು ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ಇಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾಲ್ಕರಿಂದ ಐದು ನಿಮಿಷದ ಮಿತಿ ಉಳ್ಳ ಪ್ರಶ್ನೆಗೆ ಸಂಬಂಧಿಸಿ ಮಾತನಾಡಿದ ಮುಖ್ಯಮಂತ್ರಿಗಳು ಕೇಂದ್ರ ಸರಕಾರವನ್ನು ಸುದೀರ್ಘವಾಗಿ ಟೀಕಿಸಿದ್ದಾರೆ. ಗಂಟೆಗಟ್ಟಲೆ ಕೇಂದ್ರ ಸರಕಾರವನ್ನು ಟೀಕಿಸಿದ್ದು, ನಾವು ಆಕ್ಷೇಪಿಸಿದ್ದೇವೆ. ಆದರೆ, ನಮ್ಮ ಆಕ್ಷೇಪಕ್ಕೆ ಉತ್ತರಿಸುವುದನ್ನು ಬಿಟ್ಟ ಸಿಎಂ ಅವರು ಸದನದಲ್ಲಿ ಇದ್ದ ಎಲ್ಲ ವಿಪಕ್ಷಗಳನ್ನು ಗೂಂಡಾಗಳು ಎಂದಿದ್ದಾರೆ ಎಂದು ವಿವರಿಸಿದರು.
ಛೀ, ಛೀ ಎಂಬಿತ್ಯಾದಿ ಅತ್ಯಂತ ಕಠಿಣ ಕೆಟ್ಟ ಶಬ್ದಗಳನ್ನು ಅವರು ಬಳಸಿದ್ದಾರೆ. ಮುಖ್ಯಮಂತ್ರಿಗಳು ಸದನದಲ್ಲಿ ಗೂಂಡಾಗಳು ಎಂಬ ಶಬ್ದ ಬಳಸಿದ್ದನ್ನು ನಾನು ನೋಡಿಲ್ಲ. ಅವರು ಎರಡೂ ಶಬ್ದಗಳನ್ನು ವಾಪಸ್ ಪಡೆದು ಕ್ಷಮೆ ಕೇಳಲು ಆಗ್ರಹಿಸಿದ್ದೇವೆ. ಇದೆಲ್ಲವನ್ನು ಪ್ರತಿಭಟಿಸಿ ನಾವು ಮತ್ತು ನಮ್ಮ ಸಹಪಕ್ಷ ಜೆಡಿಎಸ್‍ನವರು ಸಭಾತ್ಯಾಗ ಮಾಡಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್‍ನ ಶರವಣ ಅವರು ಮಾತನಾಡಿ, ಮುಖ್ಯಮಂತ್ರಿಗಳ ಸುದೀರ್ಘ ಉತ್ತರವನ್ನು ಸೌಜನ್ಯದಿಂದ ಕೇಳಿಸಿಕೊಳ್ಳುತ್ತಿದ್ದೆವು. ಪದೇಪದೇ ಅವರು ಕೇಂದ್ರ ಸರಕಾರವನ್ನು ದೂರಿದ್ದಾರೆ. ಆಗ ಆಕ್ಷೇಪಿಸಿದಾಗ ‘ನೀವು ವಿಪಕ್ಷ ಸದಸ್ಯರು ಗೂಂಡಾಗಳಾ, ಥೂ, ಛೀ ಎಂದು ನಮ್ಮನ್ನೆಲ್ಲ ಬೆದರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ’ ಎಂದು ಟೀಕಿಸಿದರು.
ಆರೂವರೆ ಕೋಟಿ ಜನರ ಪ್ರತಿನಿಧಿಯಾಗಿರುವ ಮುಖ್ಯಮಂತ್ರಿಗಳು ಅಸಾಂವಿಧಾನಿಕ ಪದ ಬಳಸಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಪದ ಬಳಕೆಗೆ ವಿಷಾದ ಸೂಚಿಸಿಲ್ಲ. ಸಿಎಂ ಅವರ ವರ್ತನೆ, ಪದ ಪ್ರಯೋಗದಿಂದ ನಮಗೆ ಬಹಳ ನೋವಾಗಿದೆ. ಆದ್ದರಿಂದ ವಿಪಕ್ಷದ ಸದಸ್ಯರೆಲ್ಲರೂ ಸಭಾತ್ಯಾಗ ಮಾಡಿದ್ದಾಗಿ ಹೇಳಿದರು.
ರಾಜ್ಯದ ಜನರು ಮುಖ್ಯಮಂತ್ರಿಗಳ ವರ್ತನೆಗೆ ತಕ್ಕ ಉತ್ತರವನ್ನು ಸೂಕ್ತ ಸಮಯದಲ್ಲಿ ನೀಡುತ್ತಾರೆ ಎಂದು ತಿಳಿಸಿದ ಅವರು, ಇವತ್ತು ಕಲಾಪ ಬಹಿಷ್ಕರಿಸಿದ್ದೇವೆ; ಮುಖ್ಯಮಂತ್ರಿಗಳು ಮಾತ್ರವಲ್ಲದೆ, ಸಚಿವರು ಕೂಡ ಪದೇಪದೇ ಎದ್ದುನಿಂತು ವಿಪಕ್ಷದವರು ಮಾತನಾಡಲು ಅವಕಾಶ ಕೊಟ್ಟಿಲ್ಲ ಎಂದು ತಿಳಿಸಿದರು. ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತು ಇತರ ಸದಸ್ಯರು ಇದ್ದರು.
‘ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಹೀಗಿದೆ ‘ರಾಜ್ಯ ಸರ್ಕಾರ’ದಿಂದ ಮಾನ್ಯತೆ ಪಡೆದ ‘ಖಾಸಗಿ ಆಸ್ಪತ್ರೆ’ಗಳ ಪಟ್ಟಿ