ಕೊಪ್ಪಳ : ಈಗಾಗಲೇ ಆಕೆಗೆ ಎರಡು ಹೆಣ್ಣು ಮಕ್ಕಳು ಇದ್ದವು. ಇದೀಗ ಮೂರನೇ ಮಗು ಕೂಡ ಹೆಣ್ಣಾಗಿದ್ದರಿಂದ ಪತಿಯು ಹೆಣ್ಣು ಹೆತ್ತಿದಿಯ ಎಂದು ನಿಂದಿಸಿದ್ದಾನೆ. ಇದರಿಂದ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ತಾಲ್ಲೂಕಿನ ಚಳ್ಳಾರಿ ಗ್ರಾಮದಲ್ಲಿ ನಡೆದಿದೆ.
ಚಳ್ಳಾರಿಯ ಗಣೇಶ ಗುಮಗೇರಿ ಹಾಗೂ ಹನುಮವ್ವ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈಗಾಗಲೇ ಹನುಮವ್ವಗೆ ಎರಡು ಹೆಣ್ಣು ಮಕ್ಕಳು ಇದ್ದವು. ಕಳೆದ ಕೆಲವು ತಿಂಗಳ ಹಿಂದೆ ಮೂರನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಬಾರಿಯೂ ಕೂಡ ಹೆಣ್ಣು ಮಗು ಆಗಿದ್ದರಿಂದ ಗಣೇಶ್ ಹಾಗೂ ಹನುಮವ್ವ ನಡುವೆ ಆದಾಗ ಗಲಾಟೆ ಆಗುತ್ತಿತ್ತು ಇದರಿಂದ ಮನನೊಂದು ಹನುಮವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೂರನೇ ಮಗು ಹೆಣ್ಣಾದ ನಂತರ ಅಳಿಯ ಗಣೇಶ ನನ್ನ ಮಗಳಿಗೆ ವಿಪರೀತವಾಗಿ ಕಾಟ ಕೊಟ್ಟಿದ್ದಾನೆ. ಮದ್ಯ ವ್ಯಸನಿಯೂ ಆಗಿದ್ದರಿಂದ ಹೊಡೆದು ಮೂರು ಹೆಣ್ಣು ಹೆತ್ತಿದ್ದೀಯಾ ಎಂದು ನಿಂದಿಸಿದ್ದರಿಂದ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹನುಮವ್ವ ಅವರ ತಂದೆ ಬಸಪ್ಪ ಕೋರಿ ನೀಡಿದ ದೂರಿನ ಅನ್ವಯ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.