ಬೆಂಗಳೂರು: ಮಂಡ್ಯ ಜಿಲ್ಲೆಯೂ ಕಾಲಕಾಲಕ್ಕೆ ಹೇಗೆ ಕುಸಿಯುತ್ತಾ ಬಂತು ಗೊತ್ತಿದೆ. ಅತಿ ಹೆಚ್ಚು ಸಾಲ, ಅತಿ ಹೆಚ್ಚು ಆತ್ಮಹತ್ಯೆ ನಡೆಯುವ ಜಿಲ್ಲೆ ಮಂಡ್ಯ. ಅತಿ ಹೆಚ್ಚು ನಾಯಕತ್ವ ಕೊಡುವ ಜಿಲ್ಲೆಯೂ ಇದೆ. ಮಂಡ್ಯದ ಅಭಿವೃದ್ಧಿಗೆ ತ್ಯಾಗ, ತಲೆಯನ್ನೇ ಕೊಡಲು ಸಿದ್ಧರಿದ್ದೇವೆ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಮೈಶುಗರ್ ಕಾರ್ಖಾನೆಯನ್ನು ಯಾವ ರೀತಿ ಮಾಡಿದರೆಂದು ಗೊತ್ತಿದೆ. ಬೇರೆ ಪಕ್ಷದವರು ತಾವೂ ಕೆಲಸ ಮಾಡಲ್ಲ, ಮಾಡುವವರನ್ನೂ ಬಿಡಲ್ಲ. ಪಾಂಡವಪುರದ ಸಕ್ಕರೆ ಕಾರ್ಖಾನೆ ಏನು ಮಾಡಿದರು ಎಂದು ಗೊತ್ತು. ಇನ್ನೊಬ್ಬರ ರಕ್ತ ಹೀರುವವರನ್ನು ನಾಯಕ ಎಂದು ಕರೆಯುತ್ತೀರಾ ಎಂದು ಅಶ್ವತ್ಥ್ ನಾರಾಯಣ ಪ್ರಶ್ನಿಸಿದರು.
ಗುಲಾಮಗಿರಿ ಧಿಕ್ಕರಿಸಿ ಬಂದ ಬಹದ್ದೂರ್ ಗಂಡು ನಾರಾಯಣಗೌಡ. ಕಾಂಗ್ರೆಸ್, ಜೆಡಿಎಸ್ ಕುಟುಂಬದ ಪಕ್ಷಗಳು. ಬಿಜೆಪಿಯವರು ಯಾರ ಮನೆ ಬಾಗಿಲನ್ನೂ ಕೂಡ ಕಾಯಬೇಕಿಲ್ಲ. ತುಷ್ಟೀಕರಣ ರಾಜಕಾರಣ ಮಾಡುವ ಪಕ್ಷಗಳಿಗೆ ಪಾಠ ಕಲಿಸಬೇಕು. ಮಂಡ್ಯ ಜಿಲ್ಲೆಯಲ್ಲಿ 7 ಜೆಡಿಎಸ್ ಶಾಸಕರು, MLC, ಸಿಎಂ ಇದ್ದರೂ. ಲೋಕಸಭೆ ಚುನಾವಣೆಯಲ್ಲಿ ಜನರು ಏನು ಮಾಡಿದರೆಂದು ಗೊತ್ತಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಕಿಡಿಕಾರಿದರು.