ಬೆಳಗಾವಿ : ಇದೇ ಅಕ್ಟೋಬರ್ 23 ರಿಂದ 25 ರವರೆಗೆ ಮೂರು ದಿನಗಳ ಕಾಲ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಕಿತ್ತೂರು ಉತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರು ದಿನಾಂಕ ಘೋಷಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ ಅನುದಾನ ನೀಡಿದೆ. ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ.ಕಿತ್ತೂರು ರಾಣಿ ಚೆನ್ನಮ್ಮರ 200ನೇ ವಿಜಯೋತ್ಸವ ಕಾರ್ಯಕ್ರಮ ಕೂಡ ಮಾಡುತ್ತೇವೆ. ಅ.25ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಕಿತ್ತೂರು ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಅದರಲ್ಲೂ ಉತ್ಸವದ ವೇಳೆ ಮಹಿಳೆಯರಿಗೆ ವಿಶೇಷ ಕ್ರೀಡೆಗಳನ್ನು ಆಯೋಜಿಸಿದ್ದೇವೆ. ಅ.22ರ ಸಂಜೆ ಬೆಳಗಾವಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಸಮಾರೋಪ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.