ನವದೆಹಲಿ: ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಮನೆಯ ಅಡುಗೆಗೆ ಮತ್ತೆ ಸೀಮೆಎಣ್ಣೆ ಬಳಸಲು ಅನುಮತಿ ನೀಡಿದೆ. ಈ ಕುರಿತು ಗುರುವಾರ ಮಹತ್ವದ ಆದೇಶ ಹೊರಡಿಸಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ರಾಜ್ಯಗಳಿಗೆ ನಿಯಮಿತ ಕೋಟಾದ ಜೊತೆಗೆ ಹೆಚ್ಚುವರಿ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದೆ.
ಹೆಚ್ಚುವರಿ ಸೀಮೆಎಣ್ಣೆ ಹಂಚಿಕೆ: ರಾಜ್ಯಗಳಿಗೆ ಪಡಿತರ ಅಂಗಡಿಗಳ (PDS) ಮೂಲಕ ವಿತರಿಸಲು 1 ಲಕ್ಷ ಕಿಲೋಲೀಟರ್ ನಿಯಮಿತ ಕೋಟಾದ ಜೊತೆಗೆ ಹೆಚ್ಚುವರಿಯಾಗಿ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಪ್ರಾಥಮಿಕವಾಗಿ ಬಡ ಕುಟುಂಬಗಳಿಗೆ ಅಡುಗೆ ಇಂಧನವಾಗಿ ಇದನ್ನು ವಿತರಿಸಲಾಗುವುದು ಎಂದು ತಿಳಿಸಲಾಗಿದೆ.
ಹೋಟೆಲ್‌ಗಳಿಗೆ ಪರ್ಯಾಯ ಇಂಧನ ಬಳಸಲು ಅನುಮತಿ: ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಪರ್ಯಾಯ ಇಂಧನವಾಗಿ ಬಯೋಮಾಸ್, ಆರ್‌ಡಿಎಫ್ ಪೆಲೆಟ್‌ಗಳು ಮತ್ತು ಕಲ್ಲಿದ್ದಲನ್ನು (Coal) ಒಂದು ತಿಂಗಳ ಕಾಲ ಬಳಸಲು ಅನುಮತಿ ನೀಡುವಂತೆ ಪರಿಸರ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಕೇಳಿದೆ. ಇದು ಎಲ್‌ಪಿಜಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ ಅವಧಿ ಹೆಚ್ಚಳ: ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಮಸ್ಯೆಯು ಗ್ರಾಮೀಣ ಭಾಗದಲ್ಲಿ ತೀವ್ರವಾಗಿದ್ದು, ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು ಹೆಚ್ಚಿಸಲಾಗಿದೆ. ಮೊದಲು ಗ್ರಾಹಕರು 25 ದಿನಕ್ಕೊಮ್ಮೆ ಸಿಲಿಂಡರ್ ಪಡೆಯಬಹುದಾಗಿತ್ತು. ಆದರೆ ಈಗ ಅದು 45 ದಿನಗಳಿಗೆ ಹೆಚ್ಚಿಸಲಾಗಿದೆ. ಅಂದರೆ, ಇನ್ನು ಮುಂದೆ ಗ್ರಾಮೀಣ ಗ್ರಾಹಕರು 45 ದಿನಗಳಿಗೊಮ್ಮೆ ಮಾತ್ರ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತದೆ.
ದೇಶೀಯ ಸರಬರಾಜಿನ ಮೇಲೆ ಪರಿಣಾಮ: ಈ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ) ಸುಜಾತಾ ಶರ್ಮಾ ಪ್ರತಿಕ್ರಿಯಿಸಿ, ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರ ದೇಶೀಯ ಸರಬರಾಜುಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶವು ಹಿಂದೆಂದೂ ಈ ರೀತಿಯ ಪರಿಸ್ಥಿತಿಯನ್ನು ನೋಡಿರಲಿಲ್ಲ ಎಂದು ಅವರು ಹೇಳಿದರು. ಗ್ರಾಮೀಣ ಗ್ರಾಹಕರು ಈಗ 45 ದಿನಗಳ ನಂತರ ಮಾತ್ರ ಸಿಲಿಂಡರ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ ಎಂಬುದು ನಿಜಕ್ಕೂ ಕಷ್ಟಕರ ಸಂಗತಿಯಾಗಿದೆ ಎಂದು ಅವರು ಒಪ್ಪಿಕೊಂಡರು.
ಹಿನ್ನೆಲೆ: 2012 ರಲ್ಲಿ ಎಲ್‌ಪಿಜಿ ಅಡುಗೆ ಅನಿಲ ಬಳಸುವ ಅಭಿಯಾನ ಆರಂಭವಾಗಿತ್ತು. ಈಗ ಉಜ್ವಲ ಯೋಜನೆಯ ಅಡಿ ಬಡ ಕುಟುಂಬಕ್ಕೆ ಸರ್ಕಾರ ಸಬ್ಸಿಡಿ ದರದಲ್ಲಿ ಸಿಲಿಂಡರ್ ನೀಡುತ್ತಿದೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಸೀಮೆಎಣ್ಣೆ ಬಳಕೆಗೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರವು ತಾತ್ಕಾಲಿಕ ಪರಿಹಾರ ಒದಗಿಸಲು ಮುಂದಾಗಿದೆ.
ಏಷ್ಯಾದ 50 ಬೆಸ್ಟ್ ರೆಸ್ಟೋರೆಂಟ್‌ಗಳ ಪಟ್ಟಿ ರಿಲೀಸ್: ಬೆಂಗಳೂರು, ಮುಂಬೈ, ದೆಹಲಿಯ ಹೋಟೆಲ್‌ಗಳಿಗೆ ಜಾಗತಿಕ ಮನ್ನಣೆ!
BREAKING: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಒಂದೇ ದಿನದಲ್ಲಿ ಹೂಡಿಕೆದಾರರ ₹5.87 ಲಕ್ಷ ಕೋಟಿ ಭಸ್ಮ | Share Market








