ಬೆಂಗಳೂರು : ಕೇರಳದ ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಹೊರತಂದ ಹೇಮಾ ಸಮಿತಿ ವರದಿ ಸದ್ದು ಮಾಡುತ್ತಿದ್ದು, ಅದೇ ಮಾದರಿಯ ಸಮಿತಿ ಕರ್ನಾಟಕದಲ್ಲಿ ಸ್ಥಾಪನೆ ಆಗಬೇಕೆಂದು ಚಿತ್ರರಂಗದ ನಟ-ನಟಿಯರು ಒತ್ತಾಯಿಸಿದ್ದು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲೂ ಸಹ ಮಹಿಳೆಯರ ಮೇಲೆ ಆಗುತ್ತಿರವ ದೌರ್ಜನ್ಯದ ವರದಿಗೆ ಒತ್ತಾಯ ಕೇಳಿ ಬಂದಿದೆ.ಫಿಲ್ಮಂ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ ಸಂಘವು ಕರ್ನಾಟಕದಲ್ಲಿಯೂ ಕೇರಳ ಮಾದರಿಯಲ್ಲಿ ಸಮಿತಿಯೊಂದನ್ನು ರಚಿಸಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವರದಿ ಮಾಡುವಂತೆ ಹಾಗೂ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಅಗತ್ಯ ನೀತಿಗಳನ್ನು ರೂಪಿಸುವಂತೆ ಒತ್ತಾಯಿಸಿ ಎರಡು ದಿನದ ಹಿಂದಷ್ಟೆ ಸಿಎಂಗೆ ಪತ್ರ ಬರೆದಿತ್ತು.
ಆದರೆ ಇಂದು ಚಿತ್ರರಂಗದ ಹಲವು ಕಲಾವಿದರು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ಕರ್ನಾಟಕದಲ್ಲಿಯೂ ಸಹ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಸ್ಥಿತಿ-ಗತಿ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯೊಂದನ್ನು ನಿರ್ಮಿಸುವಂತೆ ಒತ್ತಾಯ ಮಾಡಿದ್ದಾರೆ.
ಜೊತೆಗೆ ಸಮಿತಿ ನಿರ್ಮಾಣದ ಬಗ್ಗೆ ಇರುವ ಅವಶ್ಯಕತೆಯನ್ನು ಸಹ ಸಿದ್ದರಾಮಯ್ಯ ಅವರಿಗೆ ಮನಗಾಣಿಸುವ ಪ್ರಯತ್ನವನ್ನು ಚೇತನ್ ಅಹಿಂಸಾ ಹಾಗೂ ಇತರ ನಟಿಯರು ಮಾಡಿದ್ದಾರೆ.ಈ ಸಂದರ್ಭದಲ್ಲಿ ನಟಿ ಶ್ರುತಿ ಹರಿಹರನ್, ಸಂಗೀತಾ ಭಟ್, ನೀತು ಶೆಟ್ಟಿ ಇನ್ನೂ ಕೆಲವರು ಉಪಸ್ಥಿತರಿದ್ದರು.
ಈಗಾಗಲೇ ಫೈರ್ ಸಂಸ್ಥೆಯ ಈ ಬೇಡಿಕೆಗೆ ಚಿತ್ರರಂಗದ ಹಲವರು ಬೆಂಬಲ ಸೂಚಿಸಿದ್ದಾರೆ. ಹಲವು ಸಿನಿಮಾ ಸೆಲೆಬ್ರಿಟಿಗಳು, ಕಿರುತೆರೆ ನಟ-ನಟಿಯರು ಸಹ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ-ಗತಿ ಸುಧಾರಣೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಈಗಾಗಲೇ 150 ಕ್ಕೂ ಹೆಚ್ಚು ಮಂದಿ ಸಿಎಂಗೆ ನೀಡಿರುವ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.