ತಿರುವನಂತಪುರಂ: ಕೇರಳದ ರಾಜಕೀಯ ಇತಿಹಾಸದಲ್ಲಿ ಈ ಬಾರಿ ದೊಡ್ಡ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ಸಿಕ್ಕಿದೆ. ದಶಕದ ಕಾಲ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF), ಈ ಬಾರಿ ಆಡಳಿತಾರೂಢ ಎಲ್‌ಡಿಎಫ್ (LDF) ಕೋಟೆಯನ್ನು ಭೇದಿಸಿ ಗದ್ದುಗೆ ಏರಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.
140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 71 ಅನ್ನು ಯುಡಿಎಫ್ ಸುಲಭವಾಗಿ ದಾಟಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ. ಆಡಳಿತ ವಿರೋಧಿ ಅಲೆ ಯುಡಿಎಫ್‌ಗೆ ಪ್ಲಸ್ ಪಾಯಿಂಟ್ ಆಗಿದೆ.
ಸತತ ಮೂರನೇ ಬಾರಿ ಅಧಿಕಾರ ಹಿಡಿಯುವ ಪಿಣರಾಯಿ ವಿಜಯನ್ ಅವರ ಕನಸಿಗೆ ಈ ಬಾರಿ ಮತದಾರರು ತಣ್ಣೀರೆರಚುವ ಸಾಧ್ಯತೆಯಿದೆ. ಹತ್ತು ವರ್ಷಗಳ ಆಡಳಿತದ ನಂತರ ಬದಲಾವಣೆ ಬಯಸಿರುವ ಕೇರಳಿಗರು ಯುಡಿಎಫ್ ಪರ ಒಲವು ತೋರಿದ್ದಾರೆ ಎನ್ನಲಾಗಿದೆ.
ಕೇರಳದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ (NDA), ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡಿದ್ದರೂ, ಸ್ಥಾನಗಳ ಗಳಿಕೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣುವ ಸಾಧ್ಯತೆ ಕಡಿಮೆ ಎಂದು ವರದಿಗಳು ಹೇಳಿವೆ.








