ನವದೆಹಲಿ: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತನ್ನ ಬಿಡುಗಡೆಯನ್ನು ಪ್ರಶ್ನಿಸಿ ಸಿಬಿಐ (CBI) ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ಹಿಂದೆ ಸರಿಯಬೇಕು ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಒಂದು ವೇಳೆ ಅವರೇ ವಿಚಾರಣೆ ಮುಂದುವರಿಸಿದರೆ ತಮಗೆ ನ್ಯಾಯ ಸಿಗುವ ಭರವಸೆ ಇಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ದೆಹಲಿ ಹೈಕೋರ್ಟ್‌ನಲ್ಲಿ ಸ್ವತಃ ವಾದ ಮಂಡಿಸಿದ ಕೇಜ್ರಿವಾಲ್, “ನ್ಯಾಯಮೂರ್ತಿಗಳ ಈ ಹಿಂದಿನ ಆದೇಶಗಳು ನನ್ನನ್ನು ಈಗಾಗಲೇ ಅಪರಾಧಿ ಮತ್ತು ಭ್ರಷ್ಟ ಎಂದು ಘೋಷಿಸಿದಂತಿವೆ. ಇಂತಹ ಸಂದರ್ಭದಲ್ಲಿ ಅದೇ ನ್ಯಾಯಪೀಠದಿಂದ ನಿಷ್ಪಕ್ಷಪಾತ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಈ ಹಿಂದೆ ತಮ್ಮ ಬಂಧನವನ್ನು ಎತ್ತಿ ಹಿಡಿದಿದ್ದ ಮತ್ತು ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ನ್ಯಾಯಮೂರ್ತಿ ಶರ್ಮಾ ಅವರ ತೀರ್ಪುಗಳಲ್ಲಿನ ಅವಲೋಕನಗಳು ತನ್ನ ವಿರುದ್ಧವಾಗಿವೆ ಎಂದು ಕೇಜ್ರಿವಾಲ್ ವಾದಿಸಿದ್ದಾರೆ.
ಕೇಜ್ರಿವಾಲ್ ಅವರ ಈ ‘ರೆಕ್ಯೂಸಲ್’ (ನ್ಯಾಯಾಧೀಶರ ಹಿಂದೆ ಸರಿಯುವಿಕೆ) ಅರ್ಜಿಯನ್ನು ಸಿಬಿಐ ತೀವ್ರವಾಗಿ ವಿರೋಧಿಸಿದೆ. ಇದು ನ್ಯಾಯಾಂಗದ ಘನತೆಯನ್ನು ಕುಂದಿಸುವ ಪ್ರಯತ್ನ ಮತ್ತು “ಬೆಂಚ್ ಹಂಟಿಂಗ್” (ತಮಗೆ ಅನುಕೂಲಕರವಾದ ನ್ಯಾಯಾಧೀಶರನ್ನು ಹುಡುಕುವುದು) ತಂತ್ರ ಎಂದು ತನಿಖಾ ಸಂಸ್ಥೆ ಕಿಡಿಕಾರಿದೆ.
ಫೆಬ್ರವರಿಯಲ್ಲಿ ಕೆಳ ನ್ಯಾಯಾಲಯವು ಕೇಜ್ರಿವಾಲ್ ಮತ್ತು ಇತರರನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಿತ್ತು (Discharge). ಇದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ.








