ಬೆಂಗಳೂರು: ಹೆಣ್ಣೆಂದರೆ ಶಕ್ತಿದೇವತೆ. ಹೆಣ್ಣೊಬ್ಬಳು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬ ಪರಮಸತ್ಯವನ್ನು ಜಗತ್ತಿಗೆ ಸಾರಿದ ನಮ್ಮ ಕನ್ನಡ ಮಣ್ಣಿನ ಹೆಣ್ಣುಮಗಳು ಚೆನ್ನಮ್ಮನವರು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಿಗಿಯವರು ಅಭಿಪ್ರಾಯಪಟ್ಟರು.
ಕಿತ್ತೂರು ರಾಣಿಚೆನ್ನಮ್ಮ ಜಯಂತಿ ಅಂಗವಾಗಿ ಕನ್ನಡ ಭವನದ ಆವರಣದಲ್ಲಿ ಬೇಲಿ ಮಠದ ಶಿವರುದ್ರ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚೆನ್ನಮ್ಮ ಅಸೀಮ ಶೌರ‍್ಯ, ಧೈರ್ಯ, ತ್ಯಾಗ, ರಾಜನೀತಿ, ಮಾತೃವಾತ್ಸಲ್ಯ ಮುಂತಾದ ಸದ್ಗುಣಗಳ ಖನಿ. ಎಂದೆಂದಿಗೂ ಕನ್ನಡದ ಹೆಣ್ಣುಮಕ್ಕಳ ಪ್ರತಿನಿಧಿ ಆಗಿದ್ದರು.
ಇಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಲಾಗುತ್ತಿದ್ದರೂ, ವಾಸ್ತವವಾಗಿ ಇದು ಕಿತ್ತೂರು ಸಂಸ್ಥಾನ ಬ್ರಿಟೀಷರ ವಿರುದ್ಧ ವಿಜಯೋತ್ಸವ ಸಾಧಿಸಿದ ದಿನವಾಗಿದೆ. ಬ್ರಿಟೀಷ್ ಕಲೆಕ್ಟರ್ ಥ್ಯಾಕರೆ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಜಯ ಸಾಧಿಸಿದ ದಿನ ಅಕ್ಟೋಬರ್ 23. ಇದೇ ದಿನ ಥ್ಯಾಕರೆಯ ಮರಣವೂ ಆಯಿತು. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ಮೇಲೆ ವಿಜಯ ಸಾಧಿಸಿದ ಈ ಐತಿಹಾಸಿಕ ದಿನವನ್ನೇ ಕಿತ್ತೂರ ರಾಣಿ ಜಯಂತಿ ಆಗಿಯೂ ಆಚರಿಸಲು ನಿರ್ಧರಿಸಿ 2017ರಲ್ಲಿ ಕರ್ನಾಟಕ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿತು. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೇ ಅಂದು ಸಹ ಮುಖ್ಯಮಂತ್ರಿಗಳಾಗಿದ್ದರು. ಅವರ ನಿರ್ದೇಶನದ ಮೇರೆಗೆ ಈ ಸಮಾರಂಭದ ಆಚರಣೆ ಮೊದಲಾಯಿತು. ಈ ವರ್ಷ ಇದಕ್ಕೆ ವಿಶೇಷವಾದ ಮಹತ್ವವಿದೆ. ಈ ವಿಜ ಸಾಧಿಸಿ ಇಂದಿಗೆ 200 ವರ್ಷಗಳು ಪೂರ್ಣಗೊಂಡಿದೆ. ಹಾಗಾಗಿ ಈ ದಿನಕ್ಕೆ ಮತ್ತು ಈ ಸಮಾರಂಭಕ್ಕೆ ವಿಶೇಷವಾದ ಮಹತ್ವ ಇದೆ ಎಂದು ಹೇಳಿದರು.
“ಇಲಿಯಾಗಿ ಬಹುಕಾಲ ಪರಾಧೀನತೆಯಲ್ಲಿ ಬಾಳುವುದಕ್ಕಿಂತ ಹುಲಿಯಂತೆ ಸ್ವತಂತ್ರವಾಗಿ ಬದುಕಬೇಕು” ಎಂಬ ನುಡಿಗೆ ಅನ್ವರ್ಥವಾಗಿ ಭಾರತ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡುತ್ತಾ, ಬ್ರಿಟಿಷರಿಗೆ ಸಿಂಹಸ್ವಪ್ನ ಸ್ವರೂಪಳಾಗಿ ನರಕದರ್ಶನ ಮಾಡಿಸಿದ ಮಹಾತಾಯಿ, ಕನ್ನಡದ ಕುಲನಾರಿ ಕಿತ್ತೂರು ರಾಣಿ ಚೆನ್ನಮ್ಮನವರು ಎಂದು ಇತಿಹಾಸದ ದಿನಗಳನ್ನು ಮೆಲುಕು ಹಾಕಿದರು.
ಭಾರತದ ಪ್ರಪ್ರಥಮ ಮಹಿಳಾ ಸ್ವಾತಂತ್ರ‍್ಯ ಹೋರಾಟಗಾರ್ತಿಯಾದ ಇಂತಹ ಮಹಾಮಾತೆಯ ಜಯಂತಿಯನ್ನು ಆಚರಿಸುವ ಮೂಲಕ ಆ ಮಹಾನ್ ಚೇತನದ ಸ್ಮರಣೆ ಮಾಡಿಕೊಳ್ಳುವ ಸೌಭಾಗ್ಯ ನಮಗೊದಗಿ ಬಂದಿರುವುದು ನಮ್ಮ ಅದೃಷ್ಟ ಎಂದರು.
ರಾಣಿ ಚೆನ್ನಮ್ಮನವರ ಜೀವನವೇ ಅತ್ಯಂತ ರೋಚಕ, ಹೋರಾಟದ ಅಧ್ಯಾಯ. ಬೆಳಗಾವಿ ಜಿಲ್ಲೆಯ ಕಾಕತಿಯ ದೇಸಾಯಿಯವರ ಪುತ್ರಿಯಾಗಿ ಹುಟ್ಟಿದ ಚೆನ್ನಮ್ಮನವರು ಅಂದಿನ ಕಾಲದ ಎಲ್ಲಾ ಹೆಣ್ಣುಮಕ್ಕಳಂತೆ ಕೇವಲ ಅಡುಗೆ ಮನೆಗೆ ಮಾತ್ರವೇ ಮೀಸಲಾಗದೇ ತಂದೆಯ ಪ್ರೋತ್ಸಾಹದೊಂದಿಗೆ ಅಂದಿನ ಕಾಲಮಾನದಲ್ಲಿ ಕೇವಲ ಗಂಡುಮಕ್ಕಳ ವಿದ್ಯೆ ಎನಿಸಿಕೊಂಡಿದ್ದ ಕುದುರೆ ಸವಾರಿ, ಶಸ್ತ್ರಾಭ್ಯಾಸ, ರಾಜಕೀಯ ಶಿಕ್ಷಣ, ವೇದ-ಪುರಾಣ-ಇತಿಹಾಸಗಳ ಅಧ್ಯಯನಗಳಂತಹ ಶಿಕ್ಷಣವನ್ನೂ ಕರಗತ ಮಾಡಿಕೊಂಡಿದ್ದರು.
ಪತಿಯ ಮರಣಾನಂತರ ಮಗ ಶಿವಲಿಂಗ ರುದ್ರಸರ್ಜನನ್ನು ಪಟ್ಟಕ್ಕೇರಿಸಿ, ಬ್ರಿಟಿಷರ ಕುತಂತ್ರಕ್ಕೆ ಅವನು ಬಲಿಯಾದಾಗ ಹಿಂಜರಿಯದೇ ಅವನ ಮಗನನ್ನೇ ದತ್ತು ತೆಗೆದುಕೊಂಡು ಸಿಂಹಾಸನದ ಮೇಲೆ ಕೂರಿಸುತ್ತಾರೆ. ಆ ಮಗುವಿಗೆ ಹಕ್ಕಿಲ್ಲವೆಂಬ ನೆವದಿಂದ ಬ್ರಿಟಿಷರು ರಾಜ್ಯವನ್ನು ಕಿತ್ತುಕೊಳ್ಳಲು ಹವಣಿಸಿದಾಗ “ಕಿತ್ತೂರು ವೀರ ಅರಸರು ಕಟ್ಟಿ ಬೆಳೆಸಿದ ಸ್ವತಂತ್ರ ರಾಷ್ಟ್ರವೇ ಹೊರತು ತಕ್ಕಡಿ ಹಿಡಿದು ವ್ಯಾಪಾರಕ್ಕೆ ಬಂದ ಪರಕೀಯರ ಸೊತ್ತಲ್ಲ. ನಮ್ಮ ಮೈಯಲ್ಲಿ ಹರಿಯುತ್ತಿರುವುದು ವೀರ ಕ್ಷಾತ್ರ ರಕ್ತ, ಕೊಳಕು ನೀರಲ್ಲ” ಎಂದು ಹೇಳಿ ತಾವೇ ರಾಜ್ಯಭಾರವನ್ನು ವಹಿಸಿಕೊಂಡು, ಅಧಿಕೃತವಾಗಿ ಪಟ್ಟಕ್ಕೇರಿ ಸುಭಿಕ್ಷ ಹಾಗೂ ಸುಭದ್ರ ಆಡಳಿತ ನಡೆಸುತ್ತಾರೆ.
ಇಂತಹ ಉದಾತ್ತ ಚಿಂತನೆಯ ಮೂಲಕ ಸಮಸಮಾಜದ ಸಾಕಾರಕ್ಕೆ ಮುನ್ನುಡಿಯನ್ನು ಅಂದೇ ಬರೆದಿದ್ದ ರಾಣಿ ಚೆನ್ನಮ್ಮನವರಂಥ ವೀರವನಿತೆಯರು ಉದಿಸಿದ ಕನ್ನಡ ನಾಡು ಧನ್ಯ. ಇಂಥ ನಾಡಿನಲ್ಲಿ ಹುಟ್ಟಿದ ನಾವು ನೀವೆಲ್ಲರೂ ಆ ವೀರಮಾತೆಯ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ತನ್ಮೂಲಕ ಸದಾ ಕಾಯಕವನ್ನು ಮಾಡುತ್ತಾ ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ ಎಂದು ಸಲಹೆ ನೀಡಿದರು.
ಚೆನ್ನಮ್ಮ ಅವರು ಯಾವುದೇ ಒಂದು ಸಮಾಜಕ್ಕೆ ಸೇರಿದವರೆಲ್ಲ ಎಲ್ಲಾ ಸಮಾಜಗಳನ್ನು ಕಟ್ಟುವ ಕೆಲಸವನ್ನು ಮಾಡಿದ ವೀರ ವನಿತೆ. ಇಂತಹ ಮಹನೀಯರ ಜಯಂತಿಗಳನ್ನ ಆಚರಣೆ ಮಾಡುವ ಮೂಲಕ ಅವರ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಿವಾನಂದ ಕಾಶಪ್ಪನವರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳೆಮಲೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜ್ ಮೂರ್ತಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸೋಮಶೇಖರ್, ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್, ನಿರ್ದೇಶಕರಾದ ಡಾ.ಧರಣಿ ದೇವಿ ಮಾಲಗತ್ತಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಗ್ಗಾವಿಯಲ್ಲಿ ಬಿಜೆಪಿಗೆ ಯಾವುದೇ ಬಂಡಾಯವಿಲ್ಲ: ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟನೆ
BIGG NEWS: ರಾಜ್ಯದಲ್ಲಿ ಮತ್ತೊಂದು ಹಗರಣ ಬಯಲಿಗೆ: ಬಿಬಿಎಂಪಿ ಅಧಿಕಾರಿಗಳಿಂದ 2,067 ಕೋಟಿ ಅನುದಾನ ಗುಳುಂ, EDಗೆ ದೂರು