ಕಲಬುರಗಿ : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ತಾಲೂಕಿನ ಕರದಾಳ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಂಕ್ರಪ್ಪ ಬಸಪ್ಪ ಹನುಮಗೊಂಡ (32) ಎಂದು ಗುರುತಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ನಿಕಟವರ್ತಿಯಾಗಿದ್ದ ಶಂಕ್ರಪ್ಪ ಅಭ್ಯರ್ಥಿಗಳನ್ನು ಹುಡುಕಿ ಹಣದ ವ್ಯವಹಾರ ಮಾಡುತ್ತಿದ್ದನು. ಅಲ್ಲದೇ ಈತ ತುಮಕೂರಿನ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿ, ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಶ್ರೀ ಶೈಲ ಬಿರಾದಾರ ಎಂಬಾತನಿಗೆ ಉತ್ತರಗಳನ್ನು ಬ್ಲೂಟೂತ್ ಮೂಲಕ ನೀಡಿದ ಆರೋಪದ ಮೇರೆಗೆ ಡಿವೈಎಸ್ಪಿ ಶಂಕರಗೌಟ ಪಾಟೀಲ್ ಮತ್ತಿತರರ ತಂಡ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದೆ.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಿಐಡಿ ಪೊಲೀಸರು ಹಲವರನ್ನು ಇದುವರೆಗೆ ಬಂಧಿಸಿ ಜೈಲಿಗಟ್ಟಿದ್ದಾರೆ, ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಒಬ್ಬೊಬ್ಬರನ್ನಾಗಿ ಬಲೆಗೆ ಬೀಳಿಸುತ್ತಿದ್ದಾರೆ.