ಬೆಂಗಳೂರು: ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಚಾರ್ಜ್ ಮಾಡಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ವಿರುದ್ಧ ₹ 50 ಕೋಟಿ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಚಿವರು, ಮಾಧ್ಯಮಗಳ ಮುಂದೆ ಅಥವಾ ಲೋಕಾಯುಕ್ತರಿಗೆ ಸಾಕ್ಷ್ಯ ಒದಗಿಸುವಂತೆ ಸಂಘಕ್ಕೆ 7 ದಿನಗಳ ಗಡುವು ನೀಡಿದರು. ಏಳನೇ ದಿನದ ನಂತರ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಗಳಲ್ಲಿ ಈ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
“ತೀವ್ರ ನೋವಿನಿಂದ, ಸ್ವತಃ ಗುತ್ತಿಗೆದಾರನಾಗಿದ್ದ ಒಬ್ಬ ವ್ಯಕ್ತಿಯಾಗಿ, ನಾನು ಸದಸ್ಯನಾಗಿದ್ದ ಗುತ್ತಿಗೆದಾರರ ಸಂಘದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಪರಿಸ್ಥಿತಿ ಬಂದಿದೆ. ಒಂದು ವೇಳೆ ಕ್ರಮ ಕೈಗೊಳ್ಳದೆ ಹೋದರೆ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಮುನಿರತ್ನ ಹೇಳಿದರು.