ಬೆಂಗಳೂರು : ಮಹಿಳೆಯರು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ನಿರುದ್ಯೋಗಿ ಯುವಕರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಸ್ವಾತಂತ್ರ್ಯಾ ನಂತರ ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಸರ್ವತೋಮುಖ ಅಭಿವೃದ್ಧಿಯಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶ್ಲಾಘಿಸಿದರು.
ಇಂದು ರಾಜಭವನದ ಅಂಗಳದಲ್ಲಿರುವ ಮಹಾತ್ಮಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ನಂತರ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು, ಕರ್ನಾಟಕದ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಆಗಸ್ಟ್ 15 ನಮಗೆ ಐತಿಹಾಸಿಕ ದಿನ ಮತ್ತು ನಮಗೆ ಸ್ವಾತಂತ್ರ್ಯ ನೀಡಿದ ಆ ಮಹಾಪುರುಷರು ಮತ್ತು ಹುತಾತ್ಮರನ್ನು ಸ್ಮರಿಸುವ ದಿನ. ಈ ದಿನ ಅವರಿಂದ ಸ್ಫೂರ್ತಿ ಪಡೆದು ಹೊಸ ಹಾದಿ ಮತ್ತು ಹೊಸ ಸಂಕಲ್ಪದೊಂದಿಗೆ ಮುನ್ನಡೆಯಲು ಅವಕಾಶವಿದೆ ಎಂದರು.
ಕರ್ನಾಟಕ ದೇಶದ ಪ್ರಗತಿಪರ ರಾಜ್ಯ. ಕರ್ನಾಟಕ ರಾಜ್ಯವು ಅಭಿವೃದ್ಧಿ ಉಪಕ್ರಮಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಗುರಿಯೊಂದಿಗೆ ಮೂಲ ಸೇವೆಗಳಿಗೆ ಪ್ರವೇಶ ಸೇರಿದಂತೆ ವಿವಿಧ ನವೀನ ಮತ್ತು ಅಂತರ್ಗತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಮ್ಮ ರಾಜ್ಯವು ಪ್ರವರ್ತಕವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ದೇಶ ಮತ್ತು ವಿಶ್ವದಲ್ಲಿ ಪರಿಸರ ಅಸಮತೋಲನದ ಗಂಭೀರ ಸಮಸ್ಯೆ ಇದೆ. ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ‘ಅಮ್ಮನ ಹೆಸರಲ್ಲಿ ಒಂದು ಮರ’ ಅಭಿಯಾನದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಬೇಕು. ಪ್ಯಾರಿಸ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ಉತ್ತಮ ಪ್ರದರ್ಶನ ನೀಡಿದ ಎಲ್ಲಾ ಭಾರತೀಯ ಕ್ರೀಡಾಪಟುಗಳಿಗೆ ಅಭಿನಂದನೆಗಳು ಎಂದು ಅವರು ಹೇಳಿದರು.