ಬೆಂಗಳೂರು : ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ದುರಂತಗಳಲ್ಲಿ ಒಟ್ಟು 380 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಮಾಚಲ ಪ್ರದೇಶಕ್ಕೆ ಸಹಾಯಹಸ್ತ ನೀಡಿದ್ದು, 5 ಕೋಟಿ ರೂ. ಹಣ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಪತ್ರ ಬರೆದಿದ್ದಾರೆ.
ಹಿಮಾಚಲ ಪ್ರದೇಶ ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹಕ್ಕೆ ಅಮೂಲ್ಯ ಜೀವಗಳು ಬಲಿಯಾಗಿವೆ, ಸಾವಿರಾರು ಮನೆಗಳು ಕೊಚ್ಚಿಹೋಗಿವೆ, ಮೂಲಸೌಕರ್ಯಗಳು ನಾಶವಾಗಿವೆ. ಇದಕ್ಕೆ ಕರ್ನಾಟಕದ ಜನರು ತೀವ್ರ ಸಂತಾಪ ಸೂಚಿಸುತ್ತಾರೆ. ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಾಗ, ಇಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಒಗ್ಗಟ್ಟಾಗಿ ಅದನ್ನು ಎದುರಿಸಬೇಕು. ಹೀಗಾಗಿ, ಕರ್ನಾಟಕ ಹಿಮಾಚಲ ಪ್ರದೇಶದ ಜನರ ಜೊತೆ ಹೆಗಲಿಗೆ ಹೆಗಲಾಗಿ ನಿಲ್ಲುತ್ತದೆ. ನಿಮ್ಮ ಕಷ್ಟಕಾಲದಲ್ಲಿ ನಾವು ನಿಮ್ಮೊಂದಿದ್ದೇವೆ’ ಎಂದು ಸಿಎಂ ಸಿದ್ದರಾಮಯ್ಯ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಪತ್ರ ಬರೆದಿದ್ದಾರೆ.
ವಿಪತ್ತಿಗೀಡಾದ ಹಿಮಾಚಲ ಪ್ರದೇಶಕ್ಕೆ ಕರ್ನಾಟಕ ಸರ್ಕಾರದಿಂದ 5 ಕೋಟಿ ರೂ. ಹಣವನ್ನು ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ‘ನಾವು ನೀಡುವ ಈ ಹಣದಿಂದ ನಿಮ್ಮ ರಾಜ್ಯಕ್ಕಾದ ನಷ್ಟವನ್ನು, ಬಲಿಯಾ ಜೀವಗಳನ್ನು ವಾಪಾಸ್ ತಂದುಕೊಡಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ಆದರೆ, ಈ ದುರಂತದಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಈ ಹಣದಿಂದ ತುರ್ತು ಸೌಲಭ್ಯ ಕಲ್ಪಿಸಲು ಸಹಾಯವಾಗಲಿ ಎಂಬ ಉದ್ದೇಶ ನಮ್ಮದು’ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.