ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು ಸತತ 17ನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಿದರು. ಈ ಬಜೆಟ್ ಮಂಡನೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಮುಂಗಡ ಪತ್ರ ಮಂಡಿಸಿರುವುದಾಗಿ ತಿಳಿಸಿದರು. ಹಾಗಾದ್ರೇ ಅವರ ಸುದ್ದಿಗೋಷ್ಠಿಯ ಸಂಪೂರ್ಣ ಹೈಲೈಟ್ಸ್ ಮುಂದಿದೆ ಓದಿ.
2026-27 ನೇ ಸಾಲಿನ ರಾಜ್ಯದ ಬಜೆಟ್ಟನ್ನು ಮಂಡಿಸಿದ್ದೇನೆ. ರಾಜ್ಯದ ಈ ವರ್ಷದ ಬಜೆಟ್ ಗಾತ್ರ 4,48,004 ಕೋಟಿ ರೂ.ಗಳಷ್ಟಾಗಲಿದೆ. 2025-26ರಲ್ಲಿ ನಮ್ಮ ಬಜೆಟ್ ಗಾತ್ರ 4,09,549 ರೂಗಳಷ್ಟಿತ್ತು. ಈ ಆಯವ್ಯಯದಲ್ಲಿ 38,455 ಕೋಟಿ ರೂಗಳಷ್ಟು ಹೆಚ್ಚಿನ ಗಾತ್ರದ ಬಜೆಟ್ ಇದಾಗಿದೆ. ಶೇ.9.4 ರಷ್ಟು ಬೆಳವಣಿಗೆಯಾಗಿದೆ. ಕೇಂದ್ರದ ಬಜೆಟ್ ಬೆಳವಣಿಗೆಯ ಶೇ.ವಾರು ಬೆಳವಣಿಗೆಗಿಂತ ನಮ್ಮ ಬಜೆಟ್ ಬೆಳವಣಿಗೆ ಉತ್ತಮವಾಗಿದೆ.
ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5.5 ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ [ 2025 ರಲ್ಲಿ 50.65 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದರು. ಈ ವರ್ಷ 53.47 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದಾರೆ].
ನಾವು ಚುನಾವಣೆಗೆ ಮೊದಲು ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ನಾವು ಬಜೆಟ್‌ನಲ್ಲಿಯೇ ಪ್ರಸ್ತಾಪಿಸುವಂತೆ ಕೇಂದ್ರ ಸರ್ಕಾರದ ಅಸಹಕಾರ ಮತ್ತು ಮಲತಾಯಿ ಧೋರಣೆಯ ನಡುವೆಯೂ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಅಭಿವೃದ್ಧಿಯನ್ನೂ ಸಾಧಿಸುತ್ತಿದೆ.
ತಮಗೆ ತಿಳಿದಿರುವ ಹಾಗೆ ಇದೇ ಫೆಬ್ರವರಿಯವರೆಗೆ ನಾವು ಗ್ಯಾರಂಟಿ ಯೋಜನೆಗಳಿಗಾಗಿ 1,21,598 ಕೋಟಿ ರೂ. ಗಳನ್ನು ಜನರ ಕಲ್ಯಾಣಕ್ಕಾಗಿ ವಿನಿಯೋಗಿಸಿದ್ದೇವೆ. ರೈತರ ಪಂಪ್‌ಸೆಟ್ಟುಗಳಿಗೆ ಉಚಿತ ವಿದ್ಯುತ್ ಸಹಾಯಧನ ಯೋಜನೆಯಡಿ ಕಳೆದ 3 ವರ್ಷಗಳಲ್ಲಿ 36 ಲಕ್ಷ ನೀರಾವರಿ ಪಂಪ್ ಸೆಟ್ ಗಳಿಗೆ 48 ಸಾವಿರ ಕೋಟಿ ರೂ. ಸಹಾಯಧನ ಒದಗಿಸಿದ್ದೇವೆ. ಹಾಗೆಯೇ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಮುಂತಾದವುಗಳಿಗೆ ಸುಮಾರು 31 ಸಾವಿರ ಕೋಟಿ ರೂ. ಗಳಿಗಿಂತ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದ್ದೇವೆ. ಹಾಲಿಗೆ ನೀಡುವ ಪ್ರೋತ್ಸಾಹ ಧನ ಹಿಂದಿನ ಬಾಕಿ 609 ಕೋಟಿ ರೂ. ಸೇರಿದಂತೆ ಒಟ್ಟಾರೆ ರೂ.4523 ಕೋಟಿ ಗಳ ಪ್ರೋತ್ಸಾಹ ಧನವನ್ನು ನೀಡಿದ್ದೇವೆ. ಹಾಗೆಯೇ ರೈತರಿಗೆ ಹಲವು ರೀತಿಯ ಸಬ್ಸಿಡಿಗಳು, ವಿದ್ಯಾರ್ಥಿ ವೇತನ, ಸಂಬಳ, ಪಿಂಚಣಿ ಹೆಚ್ಚು ಮಾಡಿರುವುದು ಮುಂತಾದವುಗಳ ಮಧ್ಯೆಯೆ ನಮ್ಮ ಸರ್ಕಾರ 2025-26 ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕಳೆದ ಬಜೆಟ್ ನಲ್ಲಿ ಒದಗಿಸಿದ್ದ ಬಂಡವಾಳ ವೆಚ್ಚ 83,200 ಕೋಟಿ ರೂ. ಗಳಷ್ಟಾಗಿದ್ದರೆ, ಈ ವರ್ಷ 2026-27 ನೇ ಸಾಲಿಗೆ 84,567 ಕೋಟಿ ರೂ. ಗಳನ್ನು ಒದಗಿಸಿದ್ದೇವೆ.
ನಮ್ಮ ಸರ್ಕಾರವು 2023 ರಿಂದ ಈವರೆಗೆ 2,81,671 ಕೋಟಿ ರೂ. ಗಳನ್ನು ಬಂಡವಾಳ ಯೋಜನೆಗಳಿಗೆ ನೀಡಿದೆ.
ಕಳೆದ ಸಾಲಿನಲ್ಲಿ, 2025-26 ರಲ್ಲಿ ನಾವು ಮುಖ್ಯಮಂತ್ರಿ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 8600 ಕೋಟಿ ರೂ. ಕಾಮಗಾರಿಗಳನ್ನು ತೆಗೆದುಕೊಂಡಿದ್ದೇವೆ. ಈ ವರ್ಷ ಅದನ್ನು ಮುಂದುವರಿಸಿ 4000 ಕೋಟಿ ರೂ.ಗಳನ್ನು ಒದಗಿಸುತ್ತಿದ್ದೇವೆ. ನಾವು ಯಡಿಯೂರಪ್ಪ ನವರು ಮತ್ತು ಬೊಮ್ಮಾಯಿಯವರು ಮಾಡಿದಂತೆ ಬಜೆಟ್ ನಲ್ಲಿ ಹಣ ಒದಗಿಸದೆ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಬಜೆಟ್ ನಲ್ಲಿ ಹಣ ಒದಗಿಸಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನ್ಯಾಯಬದ್ಧ ಆಡಳಿತ ಮಾಡುತ್ತೇವೆ.
ರಾಜ್ಯದ ನೀರಾವರಿಗೆ, ರಸ್ತೆಗಳ ಸುಧಾರಣೆಗೆ, ನಗರಗಳ ಜನರ ಮೂಲಭೂತ ಸೌಕರ್ಯಗಳಿಗೆ, ಕೈಗಾರಿಕಾ ಕ್ಷೇತ್ರಕ್ಕೆ ಹಿಂದೆಂದೂ ಇಲ್ಲದಷ್ಟು ಆದ್ಯತೆ ನೀಡುತ್ತಿದ್ದೇವೆ ಎಂಬುದು ತಮಗೂ ತಿಳಿದ ಸಂಗತಿಯಾಗಿದೆ.
ಗ್ರಾಮೀಣ ಪ್ರದೇಶಗಳ ಜನರ ಮೂಲಭೂತ ಅಗತ್ಯಗಳಾದ ಕುಡಿಯುವ ನೀರು, ರಸ್ತೆಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಲ್ಲಿ 69,888 ಕೋಟಿ ರೂ. ಕಾಮಗಾರಿಗಳ ಅನುಮೋದನೆಯಾಗಿವೆ. ಇದರಲ್ಲಿ ಕೇಂದ್ರ ಸರ್ಕಾರ 30,888 ಕೋಟಿ ರೂ. ಗಳನ್ನು ಕೊಡಬೇಕಾಗಿತ್ತು. ಆದರೆ ಇದುವರೆಗೂ ನೀಡಿರುವುದು ಕೇವಲ 11,786 ಕೋಟಿ ರೂ. ಮಾತ್ರ. ರಾಜ್ಯ ಸರ್ಕಾರ ಈವರೆಗೆ 27,098 ಕೋಟಿ ರೂ. ಗಳನ್ನು ವೆಚ್ಚ ಮಾಡಿದೆ.
ಈ ಬಾರಿ ನಾವು ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ನಿಶ್ಚಯಿಸಿದ್ದೇವೆ. ಗ್ರಾಮ ಪಂಚಾಯತಿಗಳು ವಿದ್ಯುತ್ ನಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ 4000 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಅನ್ನು ಸೋಲಾರ್ ಮೈಕ್ರೋ ಗ್ರಿಡ್ ಗಳ ಮೂಲಕ ಉತ್ಪಾದಿಸುವ ಗುರಿ ಹೊಂದಿದ್ದೇವೆ. 7,110 ಕಿ.ಮೀ. ಉದ್ದದ ರಸ್ತೆಗಳನ್ನು ಎಡಿಬಿ ನೆರವಿನೊಂದಿಗೆ ಹಾಗೂ 1125 ಕಿಮೀ ಉದ್ದದ ರಸ್ತೆ ಕಾಮಗಾರಿಗಳನ್ನು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕಲ್ಯಾಣ ಪಥ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿದ್ದೇವೆ.
ಸ್ಥಳೀಯ ಸಂಸ್ಥೆಗಳಿಗೆ ನೀಡುವ ಅನುದಾನವನ್ನು ಶೇ.48 ರಿಂದ ಶೇ.50 ಕ್ಕೆ ಹೆಚ್ಚಿಸಲು ತೀರ್ಮಾನಿಸಿದ್ದೇವೆ.
ಆಲಮಟ್ಟಿ ಅಣೆಕಟ್ಟನ್ನು ಎತ್ತರ ಮಾಡುವ ಮೂಲಕ ಸುಮಾರು 15 ಲಕ್ಷ ಎಕರೆ ಭೂಪ್ರದೇಶಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ಇದಕ್ಕಾಗಿ ನಮ್ಮ ಸರ್ಕಾರ ಈ ವರ್ಷದಿಂದಲೇ ಕನ್ಸೆಂಟ್ ಅವಾರ್ಡಿನ ಮೂಲಕ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದ್ದೇವೆ.
ಚಾಮರಾಜನಗರ ಜಿಲ್ಲೆಗೆ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಗಾಗಿ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ.
ಹಾಗೆಯೇ ನಗರ ಪ್ರದೇಶದ ಒಳಚರಂಡಿ ಯೋಜನೆಗಳು, ಪಾರ್ಕುಗಳನ್ನು ಅಭಿವೃದ್ಧಿ ಮಾಡಲು ಉದ್ದೇಶಿಸಿದ್ದೇವೆ. ಬೆಂಗಳೂರು ನಗರದ ಕುಡಿಯುವ ನೀರು, ಸಂಚಾರ ವ್ಯವಸ್ಥೆಯನ್ನು ಸರಳೀಕರಣ ಮಾಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದೇವೆ.
ಪ್ರಾದೇಶಿಕ ಅಸಮಾನತೆ ನಿರ್ಮೂಲನೆಗೆ ಪ್ರೊ. ಗೋವಿಂದರಾವ್ ಅವರ ಸಮಿತಿಯ ವರದಿಯನ್ನು ಅಂಗೀಕಾರ ಮಾಡಿ, ಅದನ್ನು ಈ ವರ್ಷದಿಂದಲೇ ಅನುಷ್ಠಾನ ಮಾಡುತ್ತಿದ್ದೇವೆ.
ರಾಜ್ಯದ ಜನರ ಆರೋಗ್ಯ ಸುಧಾರಣೆಗೆ ರಾಜ್ಯ ಸರ್ಕಾರವು ಅಪಾರ ಪ್ರಮಾಣದ ಸಂಪನ್ಮೂಲಗಳನ್ನು ವಿನಿಯೋಗಿಸುತ್ತಿದೆ.
ಈ ವರ್ಷ ನಮ್ಮ ಸರ್ಕಾರವು ಹೊಸದಾಗಿ 187 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭ ಮಾಡುತ್ತಿದೆ. 46 ಹೊಸ ವಸತಿ ನಿಲಯಗಳು ಹೊಸದಾಗಿ ಪ್ರಾರಂಭ ಆಗಲಿವೆ. 14 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇವೆ. ಹಾಗೆಯೇ ಕಾರ್ಮಿಕರ ಮಕ್ಕಳಿಗಾಗಿ 104 ಶ್ರಮಿಕ ವಸತಿ ಶಾಲೆಗಳು ಪ್ರಾರಂಭವಾಗಲಿವೆ.
ಈ ವರ್ಷ ನಮ್ಮ ಬಜೆಟ್‌ನಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದೇವೆ. ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್, ಧಾರವಾಡದಲ್ಲಿ ಕೈಗಾರಿಕಾ ನೋಡ್, ಮೈಸೂರನ್ನು ರಾಜ್ಯದ ಎರಡನೇ ಐ.ಟಿ. ಸಿಟಿಯನ್ನಾಗಿಸುವುದು. ಮಂಗಳೂರಿನಲ್ಲಿ ಐಟಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಿ ಜಿ.ಸಿ.ಸಿ. (ಗ್ಲೋಬಲ್ ಕೇಪಬಿಲಿಟಿ ಸೆಂಟರ್) ಸ್ಥಾಪಿಸುವುದು ಮುಂತಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದೇವೆ.
ನೇಕಾರರು, ಮಡಿವಾಳರು, ಸವಿತಾ ಸಮಾಜದವರು ಸೇರಿದಂತೆ ದುಡಿಯುವ ಸಮುದಾಯಗಳ ಏಳಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದೇವೆ.
ಶಕ್ತಿ ಯೋಜನೆಯನ್ನು ನೀಡುವುದರ ಜೊತೆಗೆ ನಮ್ಮ ಸರ್ಕಾರವು ಹೊಸದಾಗಿ 6596 ಬಸ್ಸುಗಳನ್ನು ಖರೀದಿಸಿ ಒದಗಿಸಿದೆ. ಈ ವರ್ಷ ಮತ್ತೆ 1000 ಹೊಸ ಡೀಸೆಲ್ ಬಸ್ಸುಗಳನ್ನು ಒದಗಿಸಲು ಹಾಗೂ 4000 ವಿದ್ಯುತ್ ಚಾಲಿತ ಬಸ್ಸುಗಳನ್ನು ಒದಗಿಸಲು ಸಹ ತೀರ್ಮಾನಿಸಿದೆ. ಇದರ ಜೊತೆಯಲ್ಲಿ ಸಾರಿಗೆ ನಿಗಮಗಳ ನೌಕರರಿಗೆ ವೇತನ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ. ವೇತನ ಬಾಕಿ ಪಾವತಿಗಾಗಿ 1271 ಕೋಟಿ ರೂ. ಒದಗಿಸಲು ಸಹ ಉದ್ದೇಶಿಸಿದ್ದೇವೆ.
ಇವುಗಳಷ್ಟೆ ಅಲ್ಲದೆ, ರಾಜ್ಯದ ಆಡಳಿತ ಸುಧಾರಣೆಗೆ ಇನ್ನಿಲ್ಲದಷ್ಟು ಒತ್ತು ನೀಡಿದ್ದು, ನಮ್ಮ ಬಜೆಟ್ ಭಾಷಣದ ಪುಸ್ತಕದಲ್ಲಿ 29 ಪ್ಯಾರಾಗಳು ಆಡಳಿತ ಸುಧಾರಣೆಗೆ ಸಂಬಂಧಪಟ್ಟಿವೆ. ನಮ್ಮ ಸರ್ಕಾರವು ಡ್ರಗ್ಸ್ ವಿರುದ್ಧ ಸಮರವನ್ನೇ ಸಾರಿದ್ದು, ಮಾದಕ ವ್ಯಸನಮುಕ್ತ ಕರ್ನಾಟಕ ಮಾಡಬೇಕೆಂಬ ಸಂಕಲ್ಪ ಹೊಂದಿದ್ದೇವೆ.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಲು ತೀರ್ಮಾನ ಮಾಡಿದ್ದೇವೆ.
ಆದಿವಾಸಿಗಳ ಕಲ್ಯಾಣಕ್ಕೆ ಆದ್ಯತೆ ನೀಡಿದ್ದೇವೆ. ಅವರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುತ್ತಿದ್ದೇವೆ. ಹಾಗೆಯೇ, ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಆಯೋಗವೊಂದನ್ನು ರಚಿಸಲು ತೀರ್ಮಾನಿಸಿದ್ದೇವೆ.
ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಆರಂಭದಲ್ಲಿಯೇ 11ಜಿ ಮಾದರಿ ಆರ್ಥಿಕತೆಯ ರಾಜ್ಯ ಎಂದು ವ್ಯಾಖ್ಯಾನಿಸಿದ್ದೇವೆ. ನಾವು ಏನು ಮಾಡುತ್ತಿದ್ದೇವೆಯೋ ಅದರ ಪ್ರತಿಬಿಂಬದ ಪರಿಕಲ್ಪನೆಯಾಗಿದೆ.
ನಾನು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಖಾಲಿ ಹುದ್ದೆಗಳನ್ನು ಭ ರ್ತಿ ಮಾಡುವ ಉದ್ಧೇಶದಿಂದ 56,432 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದೇವೆ.
ಎಸ್.ಸಿ.ಪಿ. – ಟಿ.ಎಸ್.ಪಿ. ಗಾಗಿ ಈ ವರ್ಷ 2026-27ನೇ ಸಾಲಿಗೆ 44,632 ಕೋಟಿ ರೂ. ಒದಗಿಸಲಾಗಿದೆ. ಕಳೆದ ವರ್ಷ 2025-26ನೆ ಸಾಲಿಗೆ ಹೋಲಿಸಿದರೆ 2614 ಕೋಟಿ ರೂ. ಹೆಚ್ಚಿನ ಮೊತ್ತವಾಗಿದೆ.
ಇಷ್ಟೆಲ್ಲದರ ನಡುವೆ ನಮ್ಮ ವಿತ್ತೀಯ ಶಿಸ್ತನ್ನು ಹಾಳು ಮಾಡಿಲ್ಲ. ನಮ್ಮ ವಿತ್ತೀಯ ಕೊರತೆ 2026-27 ನೇ ಸಾಲಿನಲ್ಲೂ ಶೇ.2.95 ರಷ್ಟಿರಲಿದೆ. ನಮ್ಮ ಜಿ.ಎಸ್.ಡಿ.ಪಿ. ಈ ವರ್ಷ 33,05,500 ಕೋಟಿ ರೂ. ಗಳಷ್ಟಿರಲಿದೆ ಎಂದು ಅಂದಾಜು ಮಾಡಲಾಗಿದೆ.
ನಮ್ಮ ಒಟ್ಟು ಹೊಣೆಗಾರಿಕೆಗಳು ಜಿ.ಎಸ್.ಡಿ.ಪಿ. ಯ ಶೇ.24.94 ರಷ್ಟಿರಲಿದೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡಂತೆ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ.
2026-27 ವಿತ್ತೀಯ ಕೊರತೆ ವಿವರ
| ರಾಜ್ಯ | ವಿತ್ತೀಯ ಕೊರತೆ
(ಶೇ.ವಾರು ಪ್ರಮಾಣ) |
| ಕರ್ನಾಟಕ | 2.95 |
| ತಮಿಳುನಾಡು | 3.30 |
| ಆಂಧ್ರ ಪ್ರದೇಶ | 3.80 |
| ರಾಜಸ್ಥಾನ | 3.70 |
| ಉತ್ತರ ಪ್ರದೇಶ | 3.90 |
| ಕೇರಳ | 3.40 |
| ಕೇಂದ್ರ ಸರ್ಕಾರ | 4.30 |
ಎಂದು ಅಂದಾಜಿಸಿದೆ.
2026-27 ನೇ ಸಾಲಿಗೆ ರಾಜಸ್ವ ಸ್ವೀಕೃತಿಗಳು
| ವಿವರ | 2025-26 ಆಯವ್ಯಯ | 2026-27 ಆಯವ್ಯಯ | 2025-26ಕ್ಕೆ ಹೋಲಿಸಿದರೆ ಹೆಚ್ಚಳ |
| ರಾಜಸ್ವ ಸ್ವೀಕೃತಿಗಳು | 2,92,477 | 3,15,050 | 22,573 (ಶೇ.7.7) |
| ಬಂಡವಾಳ ಸ್ವೀಕೃತಿಗಳು | 1,16,170 | 1,32,190 | 16,020 (ಶೇ.13.8) |
| ಒಟ್ಟು | 4,08,647 | 4,47,240 | 38,593 (ಶೇ. 9.4) |
ಈ ಬಜೆಟ್ ಜನಕೇಂದ್ರಿತ ಬಜೆಟ್, ನಾಡಿನ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ಕೇಂದ್ರಿತ ಬಜೆಟ್. ನಾಡಿನ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಧ್ಯಾನಿಸಿ ನಾವು ಈ ಬಜೆಟ್ಟನ್ನು ರೂಪಿಸಿದ್ದೇವೆ. ಹಾಗಾಗಿ ಈ ಬಜೆಟ್ ಕೇವಲ ಅಂಕಿಸಂಖ್ಯೆಗಳ ಆಟವಲ್ಲ ಎಂಬುದನ್ನು ಮತ್ತೊಮ್ಮೆ ನಿಮ್ಮ ಮುಂದೆ ತಿಳಿಸಬಯಸುತ್ತೇನೆ.
ನಾನು ಈ ಸರ್ಕಾರದಲ್ಲಿ 4ನೇ ಬಜೆಟ್ಟನ್ನು ಮಂಡಿಸುತ್ತಿದ್ದೇನೆ. ರಾಜ್ಯದಲ್ಲಿ ಹಿಂದೆ ಆಡಳಿತ ಮಾಡಿದ್ದ ಸರ್ಕಾರ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳೆರಡೂ ಸೇರಿ ಕರ್ನಾಟಕದ ಆರ್ಥಿಕತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದವು. ಈ ಎರಡೂ ಬಿಜೆಪಿ ಸರ್ಕಾರಗಳೂ ರಾಜ್ಯಕ್ಕೆ ಮಾಡಿರುವ ಅನ್ಯಾಯದ ಬಲೆಯಿಂದ ನಮ್ಮ ಆರ್ಥಿಕತೆಯನ್ನು ಹೊರಗೆ ತರುವ ಪ್ರಯಾಸದ ಕೆಲಸವನ್ನು ನಾನು ಮಾಡುತ್ತಿದ್ದೇನೆ.
ನಮ್ಮ ಬಜೆಟ್ ರೈತರು, ಗ್ರಾಮೀಣ ಜನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿದ್ಯಾರ್ಥಿಗಳು, ಪಶುಪಾಲಕರು, ಕಾರ್ಮಿಕರು, ನಗರಗಳ ಬಡವರು, ಮಧ್ಯಮ ವರ್ಗದವರು ಸೇರಿದಂತೆ ಸಮಗ್ರ ಜನಸಮುದಾಯಗಳ ಕಲ್ಯಾಣಕ್ಕಾಗಿ ಈ ಬಜೆಟ್ಟನ್ನು ಮಂಡಿಸಿದ್ದೇವೆ.
ನಮ್ಮ ಬಜೆಟ್‌ನಲ್ಲಿ ಈ ಬಾರಿ ರಾಜ್ಯದ ಸಮಗ್ರ ವಲಯಗಳಿಗೆ ಆದ್ಯತೆ ನೀಡಲಾಗಿದೆ. ಪ್ರಾದೇಶಿಕ ಅಸಮಾನತೆಯನ್ನು ಪ್ರಮುಖ ಸಮಸ್ಯೆ ಎಂದು ಪರಿಭಾವಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ. ಕೈಗಾರಿಕೋದ್ಯಮ, ಸೇವಾ ವಲಯಗಳಿಗೆ ಆದ್ಯತೆ, ಮೂಲಸೌಕರ್ಯಗಳ ನಿರ್ಮಾಣ, ಕೌಶಲ್ಯಾಭಿವೃದ್ಧಿ, ಮುಂತಾದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಹಾಗಾಗಿ ಇದು ಜನ ಕೇಂದ್ರಿತವಾದ ಹಾಗೂ ಜಾಗತಿಕ, ಆರ್ಥಿಕ, ಸಾಮಾಜಿಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಕರ್ನಾಟಕ ಕೇಂದ್ರಿತ ಬಜೆಟ್ ಆಗಿದೆ. ಮುಂದಿನ ದಿನಮಾನಗಳಲ್ಲಿ ಕರ್ನಾಟಕದ ಶಕ್ತಿ ಏನು ಎಂದು ನಾವು ದೇಶಕ್ಕೆ ಹಾಗೂ ಜಗತ್ತಿಗೆ ತೋರಿಸುವ ಧೃಡ ಸಂಕಲ್ಪದೊಂದಿಗೆ ಕರ್ನಾಟಕದ ಎಲ್ಲ ಜನರು ಒಂದುಗೂಡಿ ಮುನ್ನಡೆಯುವ ಸಂಕಲ್ಪದೊಂದಿಗೆ ಈ ಬಜೆಟ್ಟನ್ನು ನಾನು ಮಂಡಿಸಿದ್ದೇನೆ.
ಈ ಬಜೆಟ್‌ನಲ್ಲಿ ನಾವು ಆಡಳಿತ ಸುಧಾರಣೆ, ಕಲ್ಯಾಣ ಕಾರ್ಯಕ್ರಮ , ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಅಭಿವೃದ್ಧಿ ಕೇಂದ್ರಿತ, ನಗರಾಭಿವೃದ್ಧಿಗೆ ಆದ್ಯತೆ ನೀಡುವ, ಹೂಡಿಕೆಗೆ ಹಾಗೂ ಉದ್ಯೋಗ ಸೃಜನೆಗೆ ಅವಕಾಶ ಕಲ್ಪಿಸುವ, ಹಸಿರು ಆರ್ಥಿಕತೆಯನ್ನು ಹೆಚ್ಚಿಸುವ, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಬಜೆಟ್ ಎಂದು ಘೋಷಿಸಿದ್ದೇವೆ.
ಇಷ್ಟರ ನಡುವೆಯೂ ವಿರೋಧ ಪಕ್ಷಗಳವರು ಕೊಂಕು ಮಾತುಗಳನ್ನು ರಾಜಕೀಯ ದುರುದ್ದೇಶದಿಂದ ಆಡುತ್ತಿದ್ದಾರೆ.
ಸಾಲ
ಯಾವುದೆ ಕುಟುಂಬದ, ರಾಜ್ಯದ, ದೇಶದ ಅಭಿವೃದ್ಧಿಗೆ ಸಾಲ ಅಗತ್ಯವಿರುತ್ತದೆ. ಸಾಲವಿಲ್ಲದೆ ವ್ಯವಸ್ಥೆಯನ್ನು ಮುನ್ನಡೆಸಲಾಗುವುದಿಲ್ಲ. ಆದರೆ, ಸಾಲವನ್ನು ಯಾವ ಮಟ್ಟದಲ್ಲಿ ಮಾಡಬೇಕು ಎಂಬುದಕ್ಕೆ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯನ್ನು ಮಾಡಿಕೊಂಡಿದ್ದೇವೆ. ನಾವು ಮಾಡುವ ಸಾಲವು ಈ ಕಾಯ್ದೆಯಲ್ಲಿ ರೂಪಿಸಿಕೊಂಡ ನಿಯಮಗಳ ಒಳಗೆ ಇರಬೇಕಾಗುತ್ತದೆ. ನಾನು ಬಜೆಟ್ ಮಂಡಿಸುವಾಗ ಈ ವಿಚಾರವನ್ನು ಪ್ರಮುಖ ಕಾಳಜಿಯ ವಿಚಾರವನ್ನಾಗಿಸಿಕೊಳ್ಳುತ್ತೇನೆ.
ಬಿಜೆಪಿಯವರು ರಾಜ್ಯದ ಸಾಲದ ಬಗ್ಗೆ ಮಾತನಾಡಲು ಯಾವುದೆ ಅರ್ಹತೆಯನ್ನು ಉಳಿಸಿಕೊಂಡಿಲ್ಲ.
ರಾಜ್ಯಗಳಿಗೆ ಕೊಡಬೇಕಾದುದನ್ನು ಕೊಡದೆ, ರಾಜ್ಯಗಳ ಕುತ್ತಿಗೆ ಹಿಸುಕಿ ರಾಜ್ಯಗಳಿಂದ ತೆರಿಗೆ ಸಂಗ್ರಹಿಸುತ್ತಿರುವ ಕೇಂದ್ರ ಸರ್ಕಾರದ ಸಾಲವು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ದಾಖಲೆಗಳ ಪ್ರಕಾರ 2027 ರ ಮಾರ್ಚ್ ಅಂತ್ಯಕ್ಕೆ 63 ಲಕ್ಷ ಕೋಟಿಗಳಿಗೆ ಏರಿಕೆಯಾಗಲಿದೆ. 2014ರ ಮಾರ್ಚ್ ನಿಂದ ಈವರೆಗೆ 165.52 ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಸಾಲ ಮಾಡಲಾಗಿದೆ. ಇದರಲ್ಲಿ ಈ ಹತ್ತು ವರ್ಷಗಳಲ್ಲಿ ತೀರಿಸಿರುವ ಸಾಲ ಇಲ್ಲ. ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡುವುದಾಗಲೀ ಅಥವಾ ಇನ್ನಿತರ ಯಾವುದೆ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿಲ್ಲ.
ಕೇಂದ್ರ ಸರ್ಕಾರದ ಒಟ್ಟು ಹೊಣೆಗಾರಿಕೆಗಳು ಜಿಡಿಪಿಯ ಶೇ.55 ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ.
35 ಮೃತ ಸಿಬ್ಬಂದಿಗಳ ಕುಟುಂಬಗಳಿಗೆ 8.22 ಕೋಟಿ ಪರಿಹಾರದ ಚೆಕ್ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
GOOD NEWS: ಮೃತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಸೌಲಭ್ಯ: ರಾಜ್ಯ ಸರ್ಕಾರ ಆದೇಶ








