ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2025-26ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ 50 ಯುವ ಬರಹಗಾರರ ಹಸ್ತಪ್ರತಿಗಳ ಪ್ರಕಟಣೆಗೆ ಮಾತ್ರ ರೂ.15,000-00ಗಳ ಪ್ರೋತ್ಸಾಹಧನ ನೀಡಲಾಗುವುದು.
ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಪ್ರಾಧಿಕಾರದ ಅರ್ಜಿ ನಮೂನೆಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಅಲ್ಲದೆ ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ನೀಡಬೇಕು.
ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿ.ಟಿ.ಪಿ.ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಟ 60 ಪುಟಗಳಿರಬೇಕು. ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿ / ಸ್ನಾತಕೋತ್ತರ ಪದವಿ(PHD)ಗೆ ಸಿದ್ಧಪಡಿಸಿದ ಸಂಶೋಧನಾ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು.
ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ, ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ನಾಯಕರುಗಳ ಕುರಿತಂತೆ ನೇರವಾಗಿಯೇ ಆಗಲಿ ಅಥವಾ ಪರೋಕ್ಷವಾಗಿಯೇ ಆಗಲಿ ಮನನೋಯಿಸುವಂತಹ ವಿಷಯವಾಗಲಿ ಇರಬಾರದು. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವಂತಹ ವಿಷಯ / ಸಂಗತಿಗಳು ಪ್ರಸ್ತಾಪವಾಗಿರಬಾರದು. ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಗಳೊಂದಿಗಿನ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಆದ್ದರಿಂದ ತಮ್ಮ ಮೂಲ ಹಸ್ತಪ್ರತಿಯ ಒಂದು ಪ್ರತಿಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದು.
ಅರ್ಜಿಗಳೊಂದಿಗೆ ಹಸ್ತಪ್ರತಿ ಸಲ್ಲಿಸಲು ಕೊನೆಯ ದಿನಾಂಕ:24.12.2025ರಂದು ಸಂಜೆ 5.30ಗಂಟೆಯೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560 002 – ಅವರಿಗೆ ಅರ್ಜಿ ನಮೂನೆಯೊಂದಿಗೆ ಡಿ.ಟಿ.ಪಿ. ಮಾಡಿದ ಹಸ್ತಪ್ರತಿಯನ್ನು ಕಳುಹಿಸಿಕೊಡಲು ಕೋರಿದೆ.
ಅರ್ಜಿ ನಮೂನೆಯನ್ನು ಪಡೆಯಲು / ಹೆಚ್ಚಿನ ಮಾಹಿತಿಗಾಗಿ: ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು -560002
– ವೆಬ್ಸೈಟ್ www.kannadapustakapradhikara.com, ದೂರವಾಣಿಸಂಖ್ಯೆ: 080-22484516 / 22107704 – ಇಲ್ಲಿ ಸಂಪರ್ಕಿಸಬಹುದಾಗಿದೆ.








