ಮಂಗಳೂರು : ಮೇಲಧಿಕಾರಿಗಳ ಜೊತೆಗೆ ಅನುಚಿತವಾಗಿ ವರ್ತನೆ, ಮರಳು ಮಾಫಿಯಾಗಳೊಂದಿಗೆ ಶಾಮೀಲಾಗಿದ್ದಾರೆ ಮತ್ತು ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯದ ಆರೋಪದಲ್ಲಿ ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ನಗರ ಪೊಲೀಸ್ ಆಯುಕ್ತರು ಅನುಪಮ್ ಅಗರ್ವಾಲ್ ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ಜಪ್ಪಿನಮೊಗರು ಕಡೆಕಾರಿನಲ್ಲಿ ಅಕ್ರಮ ವ್ಯಾಪಕ ಮರಳುಗಾರಿಕೆ ನಡೆಯುತ್ತಿದ್ದರಿಂದ ಎಸಿಪಿ ಧನ್ಯಾ ನಾಯಕ್ ಕಾರ್ಯಾಚರಣೆ ನಡೆಸಲು ಅಧಿಕಾರಿಗೆ ಸೂಚಿಸಿದ್ದರೂ, ಇನ್ಸ್ ಪೆಕ್ಟರ್ ಭಜಂತ್ರಿ ನಿರ್ಲಕ್ಷ್ಯ ವಹಿಸಿದ್ದರು ಜೊತೆಗೆ ತನ್ನ ಮೇಲಧಿಕಾರಿ ಎಸಿಪಿ ಜೊತೆಗೆ ಉಡಾಫೆಯಿಂದ ಮಾತನಾಡಿದ್ದರು ಎನ್ನಲಾಗಿದೆ. ಎಂಟು ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಮರಳು ಮತ್ತು ಟಿಪ್ಪರ್ ವಾಹನಗಳನ್ನು ಮುಂದಿನ ತನಿಖೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದ್ದರು. ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಕ ಮರಳುಗಾರಿಕೆ ನಡೆಯುತ್ತಿದ್ದರಿಂದ ಎಸಿಪಿ ಧನ್ಯಾ ನಾಯಕ್ ಕಾರ್ಯಾಚರಣೆ ನಡೆಸಲು ಸೂಚಿಸಿದ್ದರೂ, ಇನ್ಸ್ ಪೆಕ್ಟರ್ ಭಜಂತ್ರಿ ನಿರ್ಲಕ್ಷ್ಯ ವಹಿಸಿದ್ದರು. ಈ ವೇಳೆ, ಭಜಂತ್ರಿಯವರು ತನ್ನ ಮೇಲಧಿಕಾರಿ ಎಸಿಪಿ ಜೊತೆಗೆ ಉಡಾಫೆಯಿಂದ ಮಾತನಾಡಿದ್ದರು ಎನ್ನಲಾಗಿದೆ. ಮರಳು ಮಾಫಿಯಾಗಳೊಂದಿಗೆ ಶಾಮೀಲಾಗಿರುವುದು ಮತ್ತು ತನ್ನೊಂದಿಗೆ ಉಡಾಫೆಯಾಗಿ ವರ್ತಿಸಿದ ಬಗ್ಗೆ ಎಸಿಪಿ ಧನ್ಯಾ ನಾಯಕ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಿಗೆ ವರದಿ ನೀಡಿದ್ದರು. ಇದಲ್ಲದೆ, ಇತ್ತೀಚೆಗೆ ಭಜಂತ್ರಿ ಅವರ ನಿವಾಸದ ಬಳಿಯ ಕೆಲವರು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ, ತಮ್ಮೊಂದಿಗೆ ದರ್ಪ ತೋರುತ್ತಿದ್ದಾರೆಂದು ಹೇಳಿದ್ದರಂತೆ. ಈ ಬಗ್ಗೆ ಕಮಿಷನರ್ ಪ್ರಶ್ನೆ ಮಾಡಿದಾಗ, ನಾವು ಬದುಕೋದು ಹೇಗೆ ಸ್ವಾಮಿ ಎಂದು ಅವರೊಂದಿಗೂ ಸೋಗಿನ ಮಾತುಗಳನ್ನಾಡಿದ್ದರು ಎನ್ನಲಾಗುತ್ತಿದೆ. ಈ ಹಿಂದೆ ಕೂಡ ಹಲವಾರು ಬಾರಿ ಸಾರ್ವಜನಿಕ ವಲಯದಲ್ಲಿ ದೂರು ಕೇಳಿ ಬರುತಿತ್ತು ಹಾಗೂ ಭಜಂತ್ರಿ ಈ ಹಿಂದೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿದ್ದಾಗಲೂ ಮೇಲಧಿಕಾರಿಗಳ ಜೊತೆಗೆ ಉಡಾಫೆಯಿಂದ ವರ್ತಿಸಿ ಹಿರಿಯ ಅಧಿಕಾರಿಗಳ ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೊಣಾಜೆ, ಉಳ್ಳಾಲ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದು ಪೊಲೀಸರಿಗೆ ಮಾಹಿತಿಯಿದ್ದರೂ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಇದಲ್ಲದೆ ಭಜಂತ್ರಿ ಮೇಲೆ ಇತರ ಆರೋಪಗಳು ಮತ್ತು ಸಾರ್ವಜನಿಕ ದೂರುಗಳು ಬಂದ ಹಿನ್ನೆಲ್ಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಅವರು ಭಜಂತ್ರಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.