ಹಾವೇರಿ : ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ ಶೂರನೂ ಅಲ್ಲ. ಅಧಿಕಾರದಲ್ಲಿದ್ದಾಗ ಏನೂ ಹರಿಯಲು ಆಗಲಿಲ್ಲ. ಈಗ ಹರಿತೀವಿ ಅಂತ ಅಂದ್ರೆ ಏನು ಹೇಳೋದು? ನಾನು ಅದಕ್ಕೆ ಹೇಳೋದು ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ ಕೈ ಅಧಿಕಾರದಲ್ಲಿದ್ರೆ ಚೆಂದ. ಹೀಗಾಗಿ ದಯವಿಟ್ಟು ನಮ್ಮ ಅಭ್ಯರ್ಥಿಗೆ ಕ್ಷೇತ್ರದ ಜನರು ಆಶೀರ್ವಾದ ಮಾಡಬೇಕು. ಯಾಸೀರ್ ಖಾನ್ ಪಠಾಣ್ ಗೆ ಮತ ನೀಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು.
ಇಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಅವರ ಪರವಾಗಿ ಮತಯಾಚನೆ ಮಾಡಿದ ಶಿವಕುಮಾರ್ ಅವರು, ಎಚ್ ಡಿ ಕುಮಾರಸ್ವಾಮಿ ದೇವೇಗೌಡರು ಈ ಸರ್ಕಾರ ಕಿತ್ತಾಕಿ ಬಿಡುತ್ತಾರಂತೆ ಸರ್ಕಾರಕ್ಕೆ ಏನು ಕಡಲೆಕಾಯಿ ಗಿಡವೇ? ಎಚ್ ಡಿ ಕುಮಾರಸ್ವಾಮಿ ವಿಜಯೇಂದ್ರ ಗೆ ಹೇಳುತ್ತಿದ್ದೇನೆ ಸರ್ಕಾರ ಕಿತ್ತಾಕೊಗೆ ಆಗಲ್ಲ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ಸಿಎಂ ಇದ್ದಾಗ ಯಾರೂ ಹಸಿದುಕೊಂಡು ಇರಬಾರದು ಅಂತ ಅನ್ನಭಾಗ್ಯ ಯೋಜನೆ ತಂದರು. ಈಗಲೂ ಭಾಗ್ಯಗಳ ಸರದಾರ ಎನಿಸಿದ್ದಾರೆ. ನಾನು ಮತ್ತು ಸಿಎಂ ಇಬ್ರೂ ಸೇರಿ ಹೋರಾಟ ಮಾಡಿದ್ದೆವು ಅದರ ಫಲವಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರು ಸಿಎಂ ಆಗಿದ್ದಾರೆ. ನಾನು ಡಿಸಿಎಂ ಆಗಿದ್ದೇನೆ. ಇದಕ್ಕೂ ಮೊದಲು ಅವರು ವಿಪಕ್ಷ ನಾಯಕರಾಗಿದ್ದರು, ನಾನು ಅಧ್ಯಕ್ಷನಾಗಿದ್ದೆ.
ಭಾರತ್ ಜೋಡೋ ಯಾತ್ರೆ ವೇಳೆ ತಾಯಿಯೊಬ್ಬರು ಸೌತೆಕಾಯಿ ಹಿಡಿದುಕೊಂಡು ಬಂದರು. ಹೊಲದಿಂದ ಬೆಳೆದ ಸವತೆಕಾಯಿ ಅಂತಾ ಅಜ್ಜಿ ರಾಹುಲ್ ಗಾಂಧಿಯವರಿಗೆ ಸೌತೆ ಕಾಯಿ ಕೊಟ್ಟಿದ್ದರು. ಈಗ ಎಲ್ಲ ಬೆಲೆ ಜಾಸ್ತಿಯಾಯ್ತು. ಅದಕ್ಕೆ ಏನು ಮಾಡಬೇಕು ಅಂತಾ ಹೆಣ್ಣುಮಕ್ಕಳನ್ನು ಕೇಳಿದ್ದೇವು. ಆಗ ನಮ್ಮ ಕುಟುಂಬ ಬೆಳೆಸಬೇಕು, ನಮಗೆ ಆರ್ಥಿಕ ಶಕ್ತಿ ಬೇಕು ಅಂದಿದ್ದರು. ಅದಕ್ಕೆ ಅಂತಾನೇ ನಾವು ಗೃಹ ಲಕ್ಷ್ಮೀ ಯೋಜನೆ ಪ್ರಾರಂಭ ಮಾಡಿದೆವು ಎಂದರು.
ನಮ್ಮ ಸರ್ಕಾರ ಜಾರಿಗೆ ತಂದಂತಹ ರೀತಿ ಒಂದೇ ಒಂದು ಕಾರ್ಯಕ್ರಮ ಮಾಡೋಕಾಗಲಿಲ್ಲ ಬಸವರಾಜ ಬೊಮ್ಮಾಯಿಯವರೇ ಬರೀ ಹಣದಿಂದ ರಾಜಕೀಯ ಮಾಡಲು ಸಾಧ್ಯವಿಲ್ಲ. ಯಾರಾದರೂ ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ಕೊಡಬಹುದಿತ್ತು. ಆದರೆ ಭರತ ಬೊಮ್ಮಾಯಿಗೆ ಟಿಕೆಟ್ ಕೊಟ್ಟುಕೊಂಡಿದ್ದಾರೆ. ನಾನು ವಿಚಾರಿಸಿದೆ ಕ್ಷೇತ್ರದಲ್ಲಿ ಬೊಮ್ಮಾಯಿ ಬಳಿ ಹೋಗಬೇಕಾದರೆ ಏಜೆಂಟ್ ಮೂಲಕ ಹೋಗಬೇಕಂತೆ ಎಂದು ವಾಗ್ದಾಳಿ ನಡೆಸಿದರು.