ಕಲಬುರಗಿ : ಎರಡು ವಾಹನಗಳ ನಡುವೆ ಅಪಘಾತ ಸಂಭವಿಸಿದ್ದರಿಂದ ಘಟನೆಗೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತೆರಳಿ ಗಲಾಟೆ ಬಿಡಿಸುವ ಸಂದರ್ಭದಲ್ಲಿ ಎಂಟು ಜನ ಯುವಕರು ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.ಗಣಪತರಾವ್ ಘಂಟೆ ಹಲ್ಲೆಗೊಳಗಾದ ಆಳಂದ ಠಾಣೆ ಪೊಲೀಸ್ ಪೇದೆ ಎನ್ನಲಾಗುತ್ತಿದೆ.
ಆಳಂದ ಹೊರವಲಯದ ಚಿಲ್ಲಾಳ ಪೆಟ್ರೋಲ್ ಪಂಪ್ ಬಳಿ ಬೊಲೆರೊ ಹಾಗೂ ಆಟೋ ಮಧ್ಯೆ ಅಪಘಾತವಾಗಿತ್ತು. ಅಪಘಾತ ಸ್ಥಳಕ್ಕೆ ಪೊಲೀಸ್ ಪೇದೆ ತೆರಳಿದ್ದರು. ಪ್ರಕರಣ ಬಗೆಹರಿಸಿ ಗಣಪತ್ರಾವ್ ಘಂಟೆ ಠಾಣೆಗೆ ತೆರಳುತ್ತಿರುವ ವೇಳೆ ಸ್ಥಳಕ್ಕೆ ನಿಪ್ಪಾಣಿ ತಾಂಡಾ ಗ್ಯಾಂಗ್ ಬಂದಿದ್ದು, ಟಂಟಂ ಆಟೋದವನ ಜೊತೆ ಗಲಾಟೆ ಆರಂಭಿಸಿದೆ.
ಈ ಜಗಳ ಬಿಡಿಸಲು ಹೋದ ಪೊಲೀಸ್ ಪೊಲೀಸ್ ಪೇದೆ ಗಣಪತ್ರಾವ್ ಘಂಟೆ ಮೇಲೆ ನಿಪ್ಪಾಣಿ ತಾಂಡಾ ಗ್ಯಾಂಗ್ನ ನಿಖಿಲ್, ಕರ್ಣ್ ಸೇರಿದಂತೆ ಎಂಟು ಜನರು ಹಲ್ಲೆ ಮಾಡಿದ್ದಾರೆ.ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಆರು ಜನ ಯುವಕರು ಪರಾರಿಯಾಗಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.