ಕಲಬುರ್ಗಿ : ಜಿಲ್ಲೆಯ ಆಳಂದ್ ಪಟ್ಟಣದಲ್ಲಿರುವ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವರಾತ್ರಿಯಂದು ರಾಘವ ಚೈತನ್ಯ ಶಿವಲಿಂಗ ದೇವಸ್ಥಾನದ ಅಡಿಗಲ್ಲು ಹಾಕುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಘವ ಚೈತನ್ಯ ಅವರು ಅಲ್ಲಿ ಈಶ್ವರಲಿಂಗ ಸ್ಥಾಪನೆ ಮಾಡಿದ್ದಾರೆ.ಆದರೆ ಮುಸ್ಲಿಮರು ಅಲ್ಲಿ ಅತಿಕ್ರಮಣ ಮಾಡಿ ಮಸೀದಿ ನಿರ್ಮಿಸಿ ಪ್ರತಿ ವರ್ಷ ಉರುಸ್ ಆಚರಿಸುತ್ತಾರೆ.ನೂರಾರು ವರ್ಷದ ಹಿಂದಿನ ಪವಿತ್ರ ಕ್ಷೇತ್ರವಿದು. ಪೂಜೆ ಸಲ್ಲಿಸಲು ಕಳೆದ ವರ್ಷವೇ ಕೋರ್ಟ್ ಅನುಮತಿ ಕೊಟ್ಟಿದೆ ಎಂದರು.
ಆ ಸ್ಥಳದಲ್ಲಿ ಈಶ್ವರ ಲಿಂಗ ಇದ್ದ ಮೇಲೆ ಜೀರ್ಣೋದ್ಧಾರ, ದೇವಸ್ಥಾನ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ. ಶಿವರಾತ್ರಿ ದಿನ ಗುದ್ದಲಿ ಪೂಜೆಯಿಂದ ಪ್ರಾರಂಭ ಮಾಡುತ್ತೇವೆ. ಯಾವುದೇ ರೀತಿಯ ಕಾನೂನು ಬಾಹಿರವಾಗಿ ಮಾಡುವುದಿಲ್ಲ. ದೇವಸ್ಥಾನ ಅಲ್ಲಿ ಕಟ್ಟುವುದು ನಿಶ್ಚಿತ ಎಂದು ಮುತಾಲಿಕ್ ಹೇಳಿದ್ದಾರೆ.
ಆದ್ದರಿಂದ ಶಿವರಾತ್ರಿಯಂದು ಅಲ್ಲಿ ಪೂಜೆ ಮಾಡುವುದು ನಮ್ಮ ಹಕ್ಕು. ಶಿವರಾತ್ರಿ ದಿನ ಆ ಸ್ಥಳದಲ್ಲಿ ಸಾವಿರಾರು ಜನ ಅಲ್ಲ, ಲಕ್ಷಾಂತರ ಜನ ಬಂದು ಪೂಜೆ ಮಾಡುತ್ತೇವೆ. ರಕ್ಷಣೆ ನೀಡುವುದು ಸರ್ಕಾರದ ಕೆಲಸ. ಸರ್ಕಾರ ಅದರ ಕರ್ತವ್ಯ ನಿರ್ವಹಿಸಲಿ, ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಅವರು ಹೇಳಿದರು.