ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಮಾಡಿರುವ ಶೇ 40 ಕಮಿಷನ್ ಆರೋಪದ ಕುರಿತಂತೆ ಜಸ್ಟಿಸ್ ನಾಗಮೋಹನದಾಸ್ ಸಮಿತಿಯು ಸ್ವಯಂಪ್ರೇರಿತ ತನಿಖೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಅವರು ಮನವಿ ಮಾಡಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಸರಕಾರದ ಅವ್ಯವಹಾರ ಕುರಿತು ನ್ಯಾಯಮೂರ್ತಿ ನಾಗಮೋಹನ್‍ದಾಸ್ ಸಮಿತಿ ಮೂಲಕ ತನಿಖೆ ಮಾಡಿಸುವುದಾಗಿ ಕಾಂಗ್ರೆಸ್ ಸರಕಾರ ಹೇಳಿದೆ. ನ್ಯಾಯಮೂರ್ತಿ ನಾಗಮೋಹನ್‍ದಾಸ್ ಅವರು ಕೆಂಪಣ್ಣ ಮಾಡಿದ ಆರೋಪಗಳ ಬಗ್ಗೆ ಸ್ವಯಂಪ್ರೇರಿತ ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರಕಾರದ ಬಗ್ಗೆ ಕೇವಲ 3 ತಿಂಗಳಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಆಡಳಿತ ಪಕ್ಷದ ಸಚಿವರು, ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ಮತ್ತು ಸರಕಾರದ ವಿರುದ್ಧ ಹೈಕಮಾಂಡಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಈ ಮೂಲಕ ಸರಕಾರದಲ್ಲಿ ಭಿನ್ನಮತ ಕಂಡುಬಂದಿದೆ ಎಂದು ವಿವರಿಸಿದರು.
ಆಡಳಿತ ಪಕ್ಷದ ಶಾಸಕರಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲು ಈ ಸರಕಾರದಲ್ಲಿ ಹಣ ಇಲ್ಲ. ರಾಜಸ್ವ ತೆರಿಗೆ ಸಂಗ್ರಹದಲ್ಲೂ ಸರಕಾರ ಹಿಂದೆ ಬಿದ್ದಿದೆ. ಈ ರೀತಿ ದಿವಾಳಿ ಎದ್ದ ಸರಕಾರದಲ್ಲಿ ‘ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.
ಈ ಹಿಂದೆ ಬಿಜೆಪಿ ಸರಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಇವತ್ತು ನೇರವಾಗಿ ಈ ಸರಕಾರದಲ್ಲಿ ಅಧಿಕಾರಿಗಳು ಶೇ 40ಕ್ಕಿಂತ ಹೆಚ್ಚು ಹಣವನ್ನು ಗುತ್ತಿಗೆದಾರರಿಂದ ಕೇಳುತ್ತಿರುವುದಾಗಿ ಹೇಳಿದ್ದು, ಸರಕಾರದ ವಿರುದ್ಧ ನೇರ ಆರೋಪವನ್ನು ಕೆಂಪಣ್ಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕೆಂಪಣ್ಣರನ್ನು ಉಪಯೋಗಿಸಿಕೊಂಡು ನಮ್ಮ ಸರಕಾರದ ವಿರುದ್ಧ ಪ್ರಧಾನಿಗಳಿಗೆ ಪತ್ರ ಬರೆಸಿದ್ದರು ಎಂದು ಆಕ್ಷೇಪಿಸಿದರು. ಪೇ ಸಿಎಂ ಪೋಸ್ಟರ್ ಹಾಕಿಸಿದ್ದರು ಎಂದರು.
ಅದೇ ಕೆಂಪಣ್ಣ ಇವತ್ತು ಈ ಸರಕಾರ, ಸರಕಾರದ ಆಡಳಿತಶಾಹಿ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಈ ಸರಕಾರದ ಜವಾಬ್ದಾರಿ ಹೊತ್ತ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ಇದಕ್ಕೆ ನೇರ ಹೊಣೆ ಎಂದು ತಿಳಿಸಿದರು. ಈ ಹಿಂದೆ ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯವು ದಾಳಿ ಮಾಡಿದಾಗ ನೂರಾರು ಕೋಟಿ ಹಣ ಸಿಕ್ಕಿತ್ತು. ಕರ್ನಾಟಕದ ಗುತ್ತಿಗೆದಾರರ ಹಣವನ್ನು ತೆಲಂಗಾಣದಲ್ಲಿ ಹಂಚಿದ್ದು ತಮಗೆಲ್ಲರಿಗೂ ತಿಳಿದಿದೆ ಎಂದು ಹೇಳಿದರು.
ಇದೇ ವಿಷಯದಲ್ಲಿ ನಿಮ್ಮ ಮನೆ ದೇವರ ಮೇಲೆ ಆಣೆ ಮಾಡಿ ಎಂದು ಡಿ.ಕೆ.ಶಿವಕುಮಾರರನ್ನು ಕೇಳಿದ್ದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಇವತ್ತು ನಮ್ಮ ಮಧ್ಯದಲ್ಲಿಲ್ಲ. ಅವರು ಆ ಕೊರಗಿನಲ್ಲೇ ಸತ್ತಿರುವುದು ನಮ್ಮ ಕಣ್ಮುಂದೆ ಇದೆ ಎಂದು ತಿಳಿಸಿದರು. ಕೆಂಪಣ್ಣನವರ ಆರೋಪಗಳಿಗೆ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು ಎಂದು ಒತ್ತಾಯ ಮಾಡಿದರು.
ತಮ್ಮ ಮೇಲಿನ ಆಪಾದನೆ, ಸರಕಾರದ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಕೇಂದ್ರ ಸರಕಾರದ ವಿರುದ್ಧವಾಗಿ ಎಲ್ಲ ಭಾಜಾ ಭಜಂತ್ರಿಗಳ ಜೊತೆ ದೆಹಲಿಯಲ್ಲಿ ಹೋಗಿ ಸತ್ಯಾಗ್ರಹ ಕುಳಿತಿದ್ದು ಸಿದ್ದರಾಮಯ್ಯನವರ ನಾಟಕ. ಈ ನಾಟಕಕ್ಕೆ ಉತ್ತರವನ್ನು ಮುಂದಿನ ಕೆಲವೇ ದಿನಗಳಲ್ಲಿ ಜನರು ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Janaspanda: ಸಿಎಂ ‘ಜನಸ್ಪಂದನ’: ವಿಶೇಷ ಚೇತನ ವ್ಯಕ್ತಿಗೆ ‘ಸಿದ್ಧರಾಮಯ್ಯ ಮಾನವೀಯ ನೆರವು’
Janaspandana: ‘ಸಿಎಂ ಜನಸ್ಪಂದನ’ಕ್ಕೆ ಭರ್ಜರಿ ರೆಸ್ಪಾನ್ಸ್: ಇದುವರೆಗೆ ‘11,601 ಅರ್ಜಿ’ ಸ್ವೀಕೃತ